Home ಜಿಲ್ಲೆ ಮಂಗಳೂರು ರಾಮಮಂದಿರ ಲೂಟಿ ‘ಸತ್ಯ ಹೊರಬರಬೇಕಾದರೆ ದಶಕದ ಹಿಂದೆ ನಿವೃತ್ತಿಯಾದ ಸುಪ್ರೀಂ ನ್ಯಾಯಾಧೀಶರಿಂದ ತನಿಖೆ- ಕೆಪಿಸಿಸಿ ವಕ್ತಾರ...

ರಾಮಮಂದಿರ ಲೂಟಿ ‘ಸತ್ಯ ಹೊರಬರಬೇಕಾದರೆ ದಶಕದ ಹಿಂದೆ ನಿವೃತ್ತಿಯಾದ ಸುಪ್ರೀಂ ನ್ಯಾಯಾಧೀಶರಿಂದ ತನಿಖೆ- ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ

ಪುತ್ತೂರು; ವಿಶ್ವದಲ್ಲಿಯೇ ಭಾರತದ ಅಭಿಮಾನಕ್ಕೆ ಭಂಗ ತಂದ ದೇಶವೇ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ ರಾಮಮಂದಿರದ ಖಜಾನೆ ಲೂಟಿ ಮಾಡಿದ ಪ್ರಕರಣವನ್ನು ಕಳೆದ ೧೦ ವರ್ಷಗಳ ಹಿಂದೆ ನಿವೃತ್ತರಾದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಆಗ ಮಾತ್ರ ಇದರ ಹಿಂದಿರುವ ಕಾಣದ ಕೈಗಳು ಹಾಗೂ ಸತ್ಯ ಹೊರಬರಲಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೧೯೮೯ರಲ್ಲಿ ಶಿಲಾಪೂಜನಾ ಹೆಸರಲ್ಲಿ ಮನೆ ಮನೆಯಿಂದ ಸಂಗ್ರಹಿಸಿದ ಅಂದಾಜು ೧೪೦೦ ಕೋಟಿ ಈಗದರ ಮಾರುಕಟ್ಟೆ ಮೌಲ್ಯ ೧೭೪೦೦ ಕೋಟಿ, ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಲ್ಲಿ ದೇಶವಿದೇಶಗಳಿಂದ ಸಂಗ್ರಹಿಸಿದ ೩೨೬೪ ಕೋಟಿ ಹಾಗೂ ಈ ಭಕ್ತರು ರಾಮದೇವರಿಗೆ ಅರ್ಪಿಸಿದ ಕೋಟಿಗಟ್ಟಲೆ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಹಣವನ್ನು ಆರ್‌ಎಸ್‌ಎಸ್ ಮತ್ತು ಪರಿವಾರ ಸಂಘಟನೆಗಳು ನುಂಗಿ ನೀರು ಕುಡಿದಿವೆ ಎಂದು ಆರೋಪಿಸಿದ ಅವರು ಈ ಲೂಟಿ ಪ್ರಕರಣ ಬೆಳಕಿಗೆ ಬಂದ ಮೇಲೆ ೩,೨೬೪ ಕೋಟಿಯಲ್ಲಿ ೨೦೭೦ ಕೋಟಿ ಮಂದಿರ ನಿರ್ಮಾಣಕ್ಕೆ, ಇತರ ಖರ್ಚು ನೆಲೆಯಲ್ಲಿ ೩೯೧ ಕೋಟಿ, ಉಳಿಕೆಯಾದ ೮೦೦ ಕೋಟಿ ಬ್ಯಾಂಕಿನಲ್ಲಿ ಉಳಿತಾಯ ಮಾಡಲಾಗಿದೆ ಎಂಬ ಲೆಕ್ಕ ಕೊಟ್ಟಿದ್ದಾರೆ. ಹಾಗಾದರೆ ಮನೆ ಮನೆಗೆ ಇಟ್ಟಿಗೆ ಹೊತ್ತುಕೊಂಡು ಹೋಗಿ ಸಂಗ್ರಹಿಸಿದ ೧೭೪೦೦ ಕೋಟಿ ಎಲ್ಲಿ ಹೋಗಿದೆ ಎಂದು ಅವರು ಪ್ರಶ್ನಿಸಿದರು.
ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಮಾಣ ಮಾಡಿದವರು ಪ್ರಧಾನಿ ಮೋದಿ. ಇದರಲ್ಲಿರುವ ಎಲ್ಲರೂ ಆರ್‌ಎಸ್‌ಎಸ್ ಮೂಲದವರು. ಕೋಟ್ಯಾನುಕೋಟಿ ಭಕ್ತರ ನಂಬಿಕೆಯ ನೆಲೆಯಲ್ಲಿ ಲೂಟಿ ಮಾಡುತ್ತಿರುವಾಗ ಈ ಚೌಕೀದಾರನೇ ಮೌನವಾಗಿದ್ದಾನೆ ಎಂದರೆ ಅದರಲ್ಲಿ ಶಾಮೀಲಾಗಿದ್ದಾನೆ ಎಂದೇ ಅರ್ಥ. ಇದೊಂದು ಆರ್‌ಎಸ್‌ಎಸ್ ಪ್ರೇರಿತ ವಿಷವರ್ತುಲ. ತನಿಖಾದಳಗಳನ್ನು ಕೈಯಲ್ಲಿಟ್ಟುಕೊಂಡಿರುವ ವ್ಯವಸ್ಥೆಯಲ್ಲಿ ನಿಜವಾದ ಸತ್ಯ ಹೊರಬರಲು ಸಾಧ್ಯವೇ ಇಲ್ಲ. ಈಗ ೮ ಮಂದಿಯನ್ನು ಬಂಧಿಸಿದ್ದಾರೆ. ಅವರೆಲ್ಲಾ ಅಲ್ಲಿನ ಕೆಲಸಗಾರರು. ಆದರೆ ಇದರ ಸೂತ್ರಧಾರಿಗಳಾದ ‘ಕಿಂಗ್‌ಪಿನ್ಗಳನ್ನು ತನಿಖಾದಾರರು ಮುಟ್ಟಲೂ ಹೋಗಿಲ್ಲ. ಅಂದರೆ ಪ್ರಕರಣದ ದಾರಿಯನ್ನು ಪೂರ್ಣವಾಗಿ ತಪ್ಪಿಸಲು ನಡೆಸುವ ಹುನ್ನಾರವೇ ಈ ತನಿಖೆಯ ನಾಟಕ ಎಂದು ಅವರು ಹೇಳಿದರು.
ಸಿ.ಟಿ.ರವಿಗೆ ತಿರುಗೇಟು..
೪೦ ವರ್ಷಗಳಿಂದ ಶ್ರೀರಾಮ ಹೆಸರಲ್ಲಿ ಮಾಡುತ್ತಿರುವ ರಾಜಕೀಯ, ಧರ್ಮ-ಧರ್ಮಗಳ ನಡುವೆ ಧ್ವೇಷ ಹುಟ್ಟಿಸಿದ ಈ ಬಿಜೆಪಿ ಸಂಘಪರಿವಾರಗಳು ರಾಮಮಂದಿರದಲ್ಲಿಯೇ ನಡೆಸಲಾದ ಹಗಲು ದರೋಡೆ ಬಗ್ಗೆ ವಿಚಾರದ ಬಗ್ಗೆ ಮಾತೇ ಆಡುತ್ತಿಲ್ಲ. ಪುತ್ತೂರಿನ ಹಿಂದೂ ರಕ್ಷಕರು ಮೌನಾಚರಣೆ ಮಾಡುತ್ತಿದ್ದಾರೆ ಎಂದ ಅವರು ಸಿ.ಟಿ.ರವಿ ದೇಶದಲ್ಲಿ ಮನೆ ಮನೆ ಸರ್ವೆ ಮಾಡಲಿ. ಯಾರು ಹಣ ಕೊಟ್ಟಿದ್ದಾರೆ. ಯಾರು ಕೊಟ್ಟಿಲ್ಲ ಎಂದು ರಶೀದಿ ಹಿಡಿದುಕೊಂಡು ತನಿಖೆ ನಡೆಸಲಿ. ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದನ್ನು ಪ್ರಶ್ನಿಸುವ ಅಧಿಕಾರ ಇದೆ ಎಂಬುವುದನ್ನು ಅವರು ಅರಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.
‘ಜೈಸ್ವಾಹಾ’ ಘೋಷಣೆ ಬೆಸ್ಟ್..!
ಕಳೆದ ೪೦ ವರ್ಷಗಳಿಂದ ರಾಮಮಂದಿರ ಹೆಸರಲ್ಲಿ ರಾಜಕೀಯ ಲಾಭ ಮಾಡುತ್ತಿರುವ ಬಿಜೆಪಿ ಸಂಘಪರಿವಾರ ಈಗ ಸಂಘಟಿತ ಲೂಟಿ ಮಾಡಿದೆ. ಶಿಲಾಪೂಜನಾ, ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ದೇವಳಕ್ಕೆ ಬಂದ ಭಕ್ತರ ಕಾಣಿಕೆಯನ್ನು ಲಪಟಾಯಿಸಿದ ಈ ಸಂಘಪರಿವಾರಕ್ಕೆ ಈಗ ‘ಜೈಶ್ರೀರಾಮ್ ಎಂಬ ಘೋಷಣೆ ಹಾಕುವ ನೈತಿಕ ಹಕ್ಕಿಲ್ಲ. ಅವರು ಇನ್ನುಮುಂದೆ ‘ಜೈಸ್ವಾಹಾ’ ಘೋಷಣೆ ಕೂಗುವುದೇ ಹೆಚ್ಚು ಸಮಂಜಸ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಪಿ.ಆಳ್ವ, ಪ್ರಧಾನಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಪದಾಧಿಕಾರಿಗಳಾದ ರವೀಂದ್ರ ರೈ ನೆಕ್ಕಿಲು ಮತ್ತು ಅಮರ್‌ನಾಥ್ ಗೌಡ ಉಪಸ್ಥಿತರಿದ್ದರು.