Home ಸಿನೆಮಾ ರಾಮನವಮಿಗೆ ಮನ ಮುಟ್ಟಿದ ‘ಮಹರ್ಷಿ ವಾಲ್ಮೀಕಿ’

ರಾಮನವಮಿಗೆ ಮನ ಮುಟ್ಟಿದ ‘ಮಹರ್ಷಿ ವಾಲ್ಮೀಕಿ’

21 ನಿಮಿಷಗಳಲ್ಲಿ ಭಕ್ತಿ, ಭಾವನೆಗಳ ಸಂಚಿಕೆ

ರಾಮಭಕ್ತ ವಾಲ್ಮೀಕಿ ಮಹರ್ಷಿಗಳ ಜೀವನವನ್ನು ಆಧಾರವಾಗಿಸಿಕೊಂಡ ಕಿರುಚಿತ್ರ ‘ಮಹರ್ಷಿ ವಾಲ್ಮೀಕಿ’ ರಾಮನವಮಿಯ ಶುಭ ಸಂದರ್ಭದಲ್ಲಿ ಅನಾವರಣಗೊಂಡಿದೆ. ಕೇವಲ 21 ನಿಮಿಷಗಳಲ್ಲಿ ಭಕ್ತಿ, ಪರಿವರ್ತನೆ ಮತ್ತು ಜೀವನ ಸಂದೇಶವನ್ನು ಹಿಡಿದಿಟ್ಟಿರುವ ಈ ಕಿರುಚಿತ್ರ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಬೇಡನಾಗಿದ್ದ ರತ್ನಕಾರನು ಋಷಿಗಳ ಮಾರ್ಗದರ್ಶನದಿಂದ ಮಹರ್ಷಿ ವಾಲ್ಮೀಕಿಯಾಗುವ ಕಥೆ ಎಲ್ಲರಿಗೂ ಪರಿಚಿತ. ಕ್ರೌಂಚ ಪಕ್ಷಿಯ ಘಟನೆ ವಾಲ್ಮೀಕಿಗೆ ರಾಮಾಯಣ ರಚನೆಗೆ ಸ್ಪೂರ್ತಿ ನೀಡಿದ ಕ್ಷಣವನ್ನು ಈ ಕಿರುಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿಸಲಾಗಿದೆ. ನಿರ್ದೇಶಕ ಪ್ರವೀಣ್ ಶಿವಣ್ಣ ತಮ್ಮ ಮೊದಲ ಪ್ರಯತ್ನದಲ್ಲೇ ಭಾವನಾತ್ಮಕವಾಗಿ ಕತೆ ಹೇಳಲು ಯಶಸ್ವಿಯಾಗಿದ್ದಾರೆ.

ರತ್ನ ದಾಸ್ ನಿರ್ಮಿಸಿರುವ ಈ ಕಿರುಚಿತ್ರದ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನೆರವೇರಿತು. ಶ್ರೀರಿಷಿ ಅವಿರ್ಭವ ಗುರು ಪೂರ್ಣದೈತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್, ಪದ್ಮಶ್ರೀ ವೆಂಕಟೇಶ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

“ಸಂಕಲನಕಾರನಾಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಮೊದಲ ಪ್ರಯತ್ನ. ತಂಡದ ಸಹಕಾರದಿಂದ ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ,” ಎಂದು ನಿರ್ದೇಶಕ ಪ್ರವೀಣ್ ಶಿವಣ್ಣ ಹೇಳಿದರು.

ವಾಲ್ಮೀಕಿ ಪಾತ್ರದಲ್ಲಿ ನಟಿಸಿರುವ ಸುಜಿತ್ ಶೆಟ್ಟಿ, “ಹದಿನಾಲ್ಕು ವರ್ಷಗಳ ನಂತರ ನಟನೆಗೆ ಮರಳಿದ್ದು ಈ ಭಕ್ತಿಪರ ಕಥೆಯ ಮೂಲಕವೇ ಆಗಿರುವುದು ವಿಶೇಷ. ಹಿರಿಯ ಕಲಾವಿದ ಶಿವಮಣಿ ಅವರೊಂದಿಗೆ ಅಭಿನಯಿಸಿದ್ದು ಸಂತಸ ತಂದಿದೆ,” ಎಂದರು.

ನಟಿ ರೂಪ ಮುತ್ತುರಾಯಪ್ಪ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಆಗಮಿಸಿದ ಗಣ್ಯರು ಹಾಗೂ ತಂಡದ ಸದಸ್ಯರಿಗೆ ನಿರ್ಮಾಪಕಿ ರತ್ನ ದಾಸ್ ಧನ್ಯವಾದ ಸಲ್ಲಿಸಿದರು. ಛಾಯಾಗ್ರಾಹಕ ತನ್ವಿಕ್ ಮತ್ತು ಸಂಗೀತ ನಿರ್ದೇಶಕ ರಾಮಾನುಜನ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.