ರಾಮನಗುಡ್ಡೆ ಕೆರೆಗೆ ಕಾವೇರಿ ನದಿ ನೀರು ತುಂಬಿಸುವ ಯೋಜನೆಗೆ ವಿದ್ಯುಕ್ತ ಚಾಲನೆ ರೈತರ ಸಂತಸ

ಸಂಜೆವಾಣಿ ವಾರ್ತೆ
ಹನೂರು.ಜ.17:-
ಕ್ಷೇತ್ರದ ನೀರಾವರಿ ಯೋಜನೆಗೆ 2000 ಕೋಟಿ ಅನುದಾನ ಬಂದರೆ ಬಹುತೇಕ ನಮ್ಮ ಹನೂರು ಕ್ಷೇತ್ರ ನೀರಾವರಿಯಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಮೂಲಕ ರೈತರ ನೆರವಾಗಬೇಕೆಂಬುದು ನನ್ನ ವಯುಕ್ತಿಕ ಉದ್ದೇಶವಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಅವರು ತಿಳಿಸಿದರು.


ತಾಲೂಕಿನ ಜನತೆಯ ನಾಲ್ಕು ದಶಕಗಳ ಬೇಡಿಕೆಯಾಗಿದ್ದ ರಾಮನಗುಡ್ಡೆ ಕೆರೆಗೆ ಕಾವೇರಿ ನದಿ ನೀರನ್ನು ಹಳ್ಳದ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಪೂಜ ಸಲ್ಲಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಕ್ಷೇತ್ರದಲ್ಲಿ ಕೆಲವು ರಸ್ತೆಗಳು ಅಭಿವೃದ್ಧಿ ಕಾಣ್ತಾ ಇದೆ. ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಆಗಬೇಕಾಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲವನ್ನ ಅಭಿವೃದ್ಧಿಪಡಿಸಲಾಗುವುದು.


ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಜೀವನಕ್ಕೆ ನೆರವಾಗುವ ರಾಮನ ಗುಡ್ಡೆ ಕೆರೆಗೆ ನೀರು ತರುತ್ತಿರುವುದು ರೈತರು ಆರ್ಥಿಕವಾಗಿ ಸಬಲರಾಗಲು ಅನುಕೂಲ ಆಗಲಿದೆ. ರೈತನಿಗೆ ಬಹಳ ಮುಖ್ಯವಾಗಿ ನೀರು ವಿದ್ಯುತ್ ಕೊಟ್ಟರೆ ಬೇರೆನನ್ನು ಕೇಳುವುದಿಲ್ಲ. ಆ ನಿಟ್ಟಿನಲ್ಲಿ ಈಗಾಗಲೇ ಗುಂಡಾಲ್ ಜಲಾಶಯ ಭರ್ತಿಯಾಗಿದೆ ಅದರ ಅಚ್ಚುಕಟ್ಟ ಪ್ರದೇಶದಲ್ಲಿ ರೈತರು ವ್ಯವಸಾಯವನ್ನು ಮಾಡುತ್ತಿದ್ದಾರೆ.


ಅದರಂತೆಯೇ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ಹರಿದು ಬರುತ್ತಿದ್ದು ಈ ಭಾಗದ ಸುಮಾರು 615 ಕ್ಕೂ ಹೆಚ್ಚು ಎಕರೆಗೆ ನೀರು ಉಣಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಮುಂದುವರೆದ ಭಾಗವಾಗಿ ಹುಬ್ಬೆ ಹುಣಸೆ ಜಲಾಶಯಕ್ಕೆ ಹಾಗೂ ಉಡುತೋರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಹರಿಸಲು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.


ಅಲ್ಲದೆ ಈಗಾಗಲೇ ಶಾಸಕರ ಅನುದಾನದಡಿಯಲ್ಲಿ ಸುಮಾರು ನಾಲ್ಕು ಕೋಟಿ ಇರುವ ವೆಚ್ಚದಲ್ಲಿ ಬರುವಂತಹ ಕೆರೆಗಳ ಹೂಳು ತೆಗೆಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೆ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಸಹ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮಿನ್ನತ್ತು ಹಳ್ಳ ಹಾಗೂ ಗೋಪಿನಾಥಂ ಜಲಾಶಯಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮವಿಸಲಾಗುವುದು. ಜೊತೆಗೆ ವಿದ್ಯುತ್ ಶಿಕ್ಷಣ ಆರೋಗ್ಯ ಹಾಗೂ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ ಎಂದರು.


ಕ್ಷೇತ್ರದಲ್ಲಿ 290 ಹಳ್ಳಿ ಬರುತ್ತಿದ್ದು ಜೆ.ಜಿ.ಎಂನಿಂದ ಕುಡಿಯುವ ನೀರಿಗಾಗಿ ಪೈಪ್ ಲೈನ್ ಅಳವಡಿಸಲಾಗಿದೆ. ಕೆಲವು ಕಾಡಂಚಿನ ಗ್ರಾಮಗಳಿಗೆ ಪೈಪ್ ಲೈನ್ ಅಳವಡಿಸಿಲ್ಲ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತೊಡಕಾಗಿದೆ. ಅದರಿಂದ ಕೇಂದ್ರ ಸರ್ಕಾರದ ಅನುಮತಿ ಬಂದ ಮೇಲೆ ಕಾಡಂಚಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಕ್ರಮ ಕೈಗೊಳ್ಳಲಾಗುವುದು.


ಉಡುತೊರೆ ಹಳ್ಳ , ಗುಂಡಲ್ ಜಲಶಾಯ. ಮಿಣ್ಣತ್ತ ಹಳ್ಳ. ಎಲ್ಲವನ್ನ ಪ್ರವಾಸಿ ತಾಣ ಮಾಡಲಿಕ್ಕೆ ಶ್ರಮಿಸುತ್ತೇನೆ. ಮಣಗಳ್ಳಿ ಹಳ್ಳದಕೆರೆ. ಹಲಗಪುರ ಕೆರೆ ಬೂದಿಪಡಗ ಕೆರೆ ಹಾಗೂ ಪಿ ಜಿ ಪಾಳ್ಯ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ರಾಮಾಪುರದಲ್ಲಿ ಡಯಾಲಿಸಸ್ ಕೇಂದ್ರವನ್ನ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಈಗಾಗಲೇ ವಿದ್ಯುತ್ ಸೋಲಾರ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಿದ್ದೇನೆ ಒಟ್ಟಾರೆ ಜನತೆಯ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.


ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಮಹೇಶ್ ಅವರು ಮಾತನಾಡಿ ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ಬರುತ್ತಿರುವುದು ರೈತರಲ್ಲರಿಗೂ ಕೂಡ ಆನಂದ ಉಂಟು ಮಾಡಿದೆ. ಆದರೆ ಕಳೆದ ಮೂರು ತಿಂಗಳ ನಿರಂತರ ಪರಿಶ್ರಮದಿಂದ ನದಿ ಮೂಲದಿಂದ ನೀರು ತೆಗೆದುಕೊಂಡು ಬರಲಾಗುತ್ತಿದೆ. ಶಾಸಕರಾಗಿ ಪರಿಶ್ರಮ ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ರಾಮನ ಗುಡ್ಡೆ ಕೆರೆಗೆ ನೀರು ತುಂಬುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವ ಸಾಮಥ್ರ್ಯ ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ಮಾಡಬೇಕು.


ಇದೆ ಸಂದರ್ಭದಲ್ಲಿ ಅಭಿಯಂತರುಗಳಾದ ರಘುಪತಿ, ಉಮೇಶ್, ಕರುಣಾಮಯಿ, ಬಸವೇಶ್, ಹಾಗೂ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಮೂರ್ತಿ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಗ್ಯ ಬಾಬು , ಶಾಗ್ಯ ರವಿ,ಮುಳ್ಳೂರು ಶಿವಮಲ್ಲು, ಗುರುಮಲ್ಲಪ್ಪ, ಹಾಗೂ ಪಟ್ಟಣ ಪಂ. ಅಧ್ಯಕ್ಷೆ ಮುಮ್ತಾಜ್ ಬಾನು, ವಿವಿಧ ಸಂಘಟನೆಗಳ ಮುಖ್ಯಸ್ಥರು, ರೈತರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.