
ಸಂಜೆವಾಣಿ ನ್ಯೂಸ್
ಮೈಸೂರು: ನ.23:- ನಗರದ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ಇಲ್ಲಿನ ಸದ್ವಿದ್ಯಾ ಪಾಠಶಾಲೆ ಆವರಣದಲ್ಲಿ ವಿವೇಕ ಯಾತ್ರೆಗೆ ಗಣ್ಯರು ಶನಿವಾರ ಚಾಲನೆ ನೀಡಿದರು.
ವಿವೇಕ ಸ್ಮಾರಕ, ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆ, ಶಿವರಾಮಪೇಟೆ, ಸಂತೆಪೇಟೆ ರಸ್ತೆ ಮಾರ್ಗವಾಗಿ ಯಾತ್ರೆ ಸಾಗಿತು. ವಿವಿಧ ರಾಮಕೃಷ್ಣ ಆಶ್ರಮಗಳಿಂದ ಆಗಮಿಸಿದ್ದ ಸ್ವಾಮೀಜಿಗಳು, ಭಕ್ತರು, ಸದ್ವಿದ್ಯಾ, ಜಗದಾಂಬ ಹಾಗೂ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಯುವ ಸಮುದಾಯ ಸ್ವಾಮಿ ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಲಖನೌ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮುಕ್ತಿನಾಥಾನಂದಜಿ ಮಾತನಾಡಿ, 1892ರ ನವೆಂಬರ್ ತಿಂಗಳಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿಗೆ ಆಗಮಿಸಿದ್ದರು. ಇಂಥ ಪುಣ್ಯಸ್ಥಳದಲ್ಲಿ ರಾಮಕೃಷ್ಣ ಆಶ್ರಮದ 100ನೇ ವರ್ಷಾಚರಣೆ ಯಾತ್ರೆಗೆ ಚಾಲನೆ ನೀಡುತ್ತಿರುವುದು ಸ್ಮರಣೀಯ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಠಮಾನ್ಯಗಳ ಶ್ರಮದಿಂದ ಇಂದು ಸನಾತನ ಧರ್ಮ ಗಟ್ಟಿಯಾಗಿ ಉಳಿದಿದೆ. ಇದಕ್ಕೆ ರಾಮಕೃಷ್ಣ ಆಶ್ರಮದ ಕೊಡುಗೆಯೂ ಅಪಾರ ಎಂದು ಶ್ಲಾಘಿಸಿದರು.
ಹಿಂದೂ ಧರ್ಮದ ಮೇಲೆ ಇಂದು ದಾಳಿಯಾಗುತ್ತಿದೆ. ಧರ್ಮದ ಶ್ರದ್ಧಾಕೇಂದ್ರಗಳಾದ ತಿರುಪತಿ, ಶಬರಿಮಲೆ, ಧರ್ಮಸ್ಥಳ ಮುಂತಾದವುಗಳ ಮೇಲೆ ಗದಾಪ್ರಹಾರ ನಡೆಸಿ ಸವಾಲೊಡ್ಡಲಾಗುತ್ತಿದೆ. ಹಾಗಿದ್ದರೂ ದೇಶದ ಸ್ವಾಮೀಜಿಗಳು, ಆಶ್ರಮಗಳ ಪರಂಪರೆ ಧರ್ಮವನ್ನು ರಕ್ಷಿಸುತ್ತಿದೆ ಎಂದರು.
ಕಾಮರಪುಕುರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಲೋಕೋತ್ತರಾನಂದಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಮಾತನಾಡಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಸ್.ಕೆ.ನರಹರಿಬಾಬು, ಕಾರ್ಯದರ್ಶಿ ಎಂ.ಡಿ.ಗೋಪಿನಾಥ್ ಹಾಜರಿದ್ದರು.



























