
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.07: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ನಿನ್ನೆ ಡಿ.ಕಗ್ಗಲ್ಲು ಗ್ರಾಮದಲ್ಲಿ ರಾಜ್ಯ ಬಡ್ಜೆಟ್ 2026-2027 ರ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ನಿನ್ನೆ ರಾಜ್ಯ ಸರ್ಕಾರ ಮಂಡಿಸಿರುವ ರಾಜ್ಯ ಸರ್ಕಾರದ 2026 – 27ರ ಬಜೆಟ್ ಸಂಪೂರ್ಣವಾಗಿ ರೈತ ಕೃಷಿ ಕಾರ್ಮಿಕರ ವಿರೋಧಿ ಹಾಗೂ ಕಾರ್ಪೊರೇಟ್ ಪರವಾಗಿದೆ. ಇದನ್ನು ಬಳ್ಳಾರಿ ಜಿಲ್ಲಾ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ, ಈ ಬಜೆಟ್ ನಲ್ಲಿ ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಪಾಪನೆ ಬಗ್ಗೆ, ಮತ್ತು ಶೀತಲ ಶೇಖರಣಾ ಗೋದಾಮು ( ಕೋಲ್ಡ್ ಸ್ಟೋರೇಜ್ ) ಸ್ಥಾಪನೆ ಮತ್ತು ಬಳ್ಳಾರಿಯಲ್ಲಿ ಕೃಷಿ ವಿ ವಿ ಬಗ್ಗೆ ಯಾವುದೇ ಪ್ರಾಸ್ತಾಪ ಇಲ್ಲಾದಾಗಿದೆ.
ಹಾಗೆಯೇ ಬೆಂಬಲ ಬೆಲೆಯ ಬಗ್ಗೆ ಯಾವ ಪ್ರಸ್ತಾಪವನ್ನು ಮಾಡಲಾಗಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರವು ಹಿಂಪಡೆಯುವ ಭರವಸೆಯನ್ನು ನೀಡಿತ್ತು. ಇದರ ಬಗ್ಗೆಯೂ ಸಹ ಸರ್ಕಾರವು ಈಗ ಮೌನವಹಿಸಿದೆ. ಸ್ಮಾರ್ಟ್ ಮೀಟರ್ ಗಳ ಮೂಲಕ ವಿದ್ಯುತ್ತನ್ನು ನೀಡಿ ರೈತರನ್ನು ವಂಚಿಸುವ ಯೋಜನೆಯನ್ನು ಸರ್ಕಾರವು ಕೈಬಿಟ್ಟಿಲ್ಲ. ಹಾಗೂ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಸಹ ರೈತರಿಗೆ ನೀಡುವಲ್ಲಿ ವಿಫಲವಾಗಿದೆ.
ಅಲ್ಲದೆ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಿ ಗ್ರಾಮೀಣ ಭಾಗದಲ್ಲಿ ಉದ್ಯೋಗವನ್ನು ಬಲಪಡಿಸುವ ಯಾವುದೇ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಈ ಬಜೆಟ್ ನಲ್ಲಿ ಪ್ರಸ್ತಾಪಿಸಿಲ್ಲ. ನಿರುದ್ಯೋಗದಲ್ಲಿ ತೊಳಲಾಡುತ್ತಿರುವ ಗ್ರಾಮೀಣ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಿ ಜೊತೆಗೆ ಖರೀದಿ ಕೇಂದ್ರಗಳನ್ನು ತೆಗೆದು ಅದರೊಂದಿಗೆ ಆವರ್ತ ನಿಧಿಯನ್ನು ತಂದು ಆ ಯೋಜನೆಯನ್ನು ಘೋಷಣೆ ಮಾಡಬೇಕಾಗಿತ್ತು. ಆದರೆ ರಾಜ್ಯ ಸರ್ಕಾರವು ಇದನ್ನು ಸಹ ಕೈಬಿಟ್ಟಿದೆ.
ಈ ಮೇಲೆ ತಿಳಿಸಲಾಗಿರುವ ಕಾರಣಗಳಿಂದ ಈಗಾಗಲೇ ರೈತರು ಅಪಾರ ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರವು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಬಡ ರೈತರ ಜೀವನವು ಇನ್ನೂ ತೀವ್ರವಾದ ಅಭದ್ರತೆಗೆ ನೂಕಿದಂತಾಗುತ್ತದೆ. ಈ ಬಜೆಟ್ ನಲ್ಲಿ ಗ್ರಾಮೀಣ ಜನತೆಗೆ ಉದ್ಯೋಗ ಕೊಡುವುದಾಗಲಿ, ಗ್ರಾಮೀಣ ಆರೋಗ್ಯವನ್ನು ಬಲಪಡಿಸುವುದಾಗಲಿ ಮತ್ತು ಪಿ ಎಚ್ ಸಿ ಗಳನ್ನು ಅಭಿವೃದ್ಧಿಪಡಿಸಿ ಬಡ ಜನರಿಗೆ ಔಷಧಿಗಳನ್ನು ಪೂರೈಸುವಂತಹ ಯಾವುದೇ ಯೋಜನೆಗಳನ್ನು ಇಲ್ಲಿ ರೂಪಿಸಲಾಗಿಲ್ಲ. ತೀವ್ರ ಆರ್ಥಿಕ ಬಿಕಟ್ಟಿನಲ್ಲಿ ಸಿಲುಕಿರುವ ರೈತರು ಪಟ್ಟಣ ಅಥವಾ ನಗರಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುವುದು ಅಸಾಧ್ಯದ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ರೈತರಿಗೆ ಈ ಬಜೆಟ್ ಯಾವ ಭರವಸೆಯನ್ನು ನೀಡುವುದಿಲ್ಲ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮತ್ತು ಆತಂಕದಲ್ಲಿರುವ ಗ್ರಾಮೀಣ ಬಡವರ ಮಕ್ಕಳಿಗೆ ಶಿಕ್ಷಣದ ಯಾವ ಭರವಸೆಯನ್ನು ನೀಡದೆ ರಾಜ್ಯ ಸರ್ಕಾರವು ಮೌನವಹಿಸಿದೆ. ಹೀಗಾಗಿ ಆರೋಗ್ಯ ಮತ್ತು ಶಿಕ್ಷಣ ರೈತರಿಗೆ ಕನಸಿನ ಮಾತಾಗುತ್ತಿದೆ.
ಅಂತಿಮವಾಗಿ, ಇತ್ತೀಚಿಗೆ ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಿಂದ ಕರ್ನಾಟಕದ ರೈತರ ಮೇಲೆಯೂ ಗಂಭೀರ ಪರಿಣಾಮಗಳು ಬೀಳುತ್ತಿವೆ. ಮೆಕ್ಕೆಜೋಳ, ಸೋಯಾ, ಹತ್ತಿ,ತೊಗರಿ ಹೀಗೆ ಹಲವಾರು ಬೆಳೆಗಳ ಬೆಲೆಗಳ ಮೇಲೆ ತೀವ್ರವಾದ ಪರಿಣಾಮ ಬೀಳುತ್ತಿದೆ ಇದನ್ನು ರಾಜ್ಯ ಸರ್ಕಾರವು ಖಂಡಿಸದೆ ಮೌನವಹಿಸಿರುವುದು ರಾಜ್ಯದ ರೈತರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುವ ಸೂಚನೆಗಳನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಮಂಡಿಸಿದ ಈ ಬಜೆಟ್ ಕಾರ್ಪೊರೇಟ್ ಕಂಪನಿಗಳ ಪರವಾದ ಹಾಗೂ ರೈತ ಕೃಷಿ ಕಾರ್ಮಿಕರ ವಿರೋಧಿಯಾಗಿದೆ, ಇದರ ವಿರುದ್ಧ ರೈತ ಮತ್ತು ಕೃಷಿ ಕಾರ್ಮಿಕರು ಬಲಿಷ್ಠ ಹೋರಾಟ ಕಟ್ಟಲು ಮುಂದೆ ಬರಬೇಕೆಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಖಾಸಿಂ ಸಾಬ್, ಗೋಪಾಲ ಗೌಡ ರೈತರಾದ ಶಿವರಾಜ್, ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು




















