
ಸಂಜೆವಾಣಿ ನ್ಯೂಸ್
ಮೈಸೂರು: ಜ.24:- ರಾಜ್ಯಪಾಲರು ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ಓದದೆ ಅವರೆ ತಯಾರು ಮಾಡಿದ ಒಂದು ಸಾಲಿನ ಭಾಷಣ ಓದಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಸಂವಿಧಾನಕ್ಕೆ ಅಪಚಾರ ಮಾಡಿದ ರಾಜ್ಯಪಾಲರಿಗೆ ಧಿಕ್ಕಾರ, 7 ಕೋಟಿ ಜನತೆಯ ಭಾವನೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಧಿಕ್ಕಾರ, ಬಿಜೆಪಿಯ ಕೈಗೊಂಬೆ ರಾಜ್ಯಪಾಲರಿಗೆ ಧಿಕ್ಕಾರ, ಜನಪರ ವಿಷಯ ಪ್ರಸ್ತಾಪಿಸದೇ ಕಾಲ್ಕಿತ್ತ ರಾಜ್ಯಪಾಲರಿಗೆ ಧಿಕ್ಕಾರ, ರಾಜ್ಯಪಾಲ ಹಠಾವೋ ಕರ್ನಾಟಕ ಬಚಾವೋ, ಬೇಡವೇ ಬೇಡ ಬಿಜೆಪಿ ಕೈಗೊಂಬೆ ರಾಜ್ಯಪಾಲ ಬೇಡ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿ, ವಿವಿಧ ಘೋಷಣೆಗಳನ್ನು ಕೂಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಸೋಮಶೇಖರ್ ಮಾತನಾಡಿ, ರಾಜ್ಯಪಾಲರ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ರಾಜ್ಯಪಾಲರು ಪ್ರತಿ ಭಾಷಣದ ಸಂದರ್ಭದಲ್ಲಿ ನನ್ನ ಸರ್ಕಾರ ನನ್ನ ಸರ್ಕಾರದ ಸಾಧನೆ ಎಂದು ಭಾಷಣ ಮಾಡುವುದು ಸಂಪ್ರದಾಯ. ಸಚಿವ ಸಂಪುಟ, ಸಚಿವರು, ಪರಿಷತ್‍ನಲ್ಲಿ ತೀರ್ಮಾನವಾದ ವಿಷಯ ಎಂದರೆ ಅದು ಏಳು ಕೋಟಿ ಜನರ ಭಾವನೆ ಇದ್ದಂತೆ. ಸರ್ಕಾರ ನಿಗದಿ ಮಾಡಿದ್ದ ಜಂಟಿ ಅಧಿವೇಶನದಲ್ಲಿ ಸರ್ಕಾರದ ಅಭಿವೃದ್ಧಿ ವಿಷಯವನ್ನು ಪ್ರಸ್ತಾಪಿಸಬೇಕಾದ ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸಿರುವುದು ನಾಡಿನ ಜನತೆಗೆ ಎಸಗಿರುವ ಮಹಾ ದ್ರೋಹ. ಇದರ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಚಿಂತಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ನಿಶ್ಚಿತ ಎಂದರು.
ಇದು ಕೇವಲ ಕರ್ನಾಟಕ ಮಾತ್ರವಲ್ಲ. ಬಿಜೆಪಿಯೇತರ ಸರ್ಕಾರಗಳು ಇರುವೆಡೆಯಲ್ಲ ರಾಜ್ಯಪಾಲರುಗಳು ಬಿಜೆಪಿಯವರ ಸೂಚನೆಯಂತೆ ವರ್ತಿಸಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡದಂತಹ ರಾಜ್ಯಪಾಲರನ್ನು ಕೂಡಲೇ ರಾಷ್ಟ್ರಪತಿಗಳು ವಾಪಸ್ಸು ಕರೆಸಿಕೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಹೆಚ್.ಎ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಜೋಗಿ ಮಹೇಶ್, ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಣ್ಣ, ಎಂ.ಸುನೀಲ್, ಶೋಭಾ ಸುನೀಲ್, ಆರ್.ಹೆಚ್.ಕುಮಾರ್, ವೀಣಾ, ಕಾಂಗ್ರೆಸ್ ಮುಖಂಡ ಶೇಖರ್, ಅಶೋಕಪುರಂ ವಾಸು, ಅರುಣ್ ಬುದ್ಧ, ಭಾಸ್ಕರ್, ಪಟಾಕಿ ಮಂಜುನಾಥ್ , ಶಂಕರ್, ಭಾಸ್ಕರ್ ಎಲ್.ಗೌಡ, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ವಿಜಯ್ ಕುಮಾರ್ ಸೇರಿ ಇನ್ನಿತರರು ಹಾಜರಿದ್ದರು.




























