ರಾಜ್ಯದ ೩ನೇ ಅತೀ ದೊಡ್ಡ ರಾಷ್ಟ್ರಧ್ವಜಸ್ತಂಭಕ್ಕೆ ಶಿಲಾನ್ಯಾಸ

ಪುತ್ತೂರು: ಕರ್ನಾಟಕ ರಾಜ್ಯದ ಅತೀ ದೊಡ್ಡ ರಾಷ್ಟ್ರಧ್ವಜಸ್ತಂಭ ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಬೆಳಗಾವಿ ಹೆಸರಾದರೆ ಇದೀಗ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದೆ. ಈ ಧ್ವಜಸ್ತಂಭಕ್ಕೆ ಡಿ.೬ ರಂದು ಶಿಲಾನ್ಯಾಸ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನೂತನ ಧ್ವಜಸ್ತಂಭಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಪಿ ಶೆಟ್ಟಿ, ನಗರಸಭೆಯ ಪೌರಾಯುಕ್ತರಾದ ವಿದ್ಯಾಕಾಳೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪೂಡಾ ಮತ್ತು ನಗರಸಭೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪುತ್ತೂರು ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಉದ್ಯಾನವನದಲ್ಲಿ ಈ ಧ್ವಜಸ್ತಂಭ ನಿರ್ಮಾಣಗೊಳ್ಳಲಿದೆ.
ಈ ದ್ವಜಸ್ತಂಭದ ಕಂಬ ೮೦ ಮೀಟರ್ ಎತ್ತರವನ್ನು ಹೊಂದಿರಲಿದ್ದು, ರಾಷ್ಟ್ರದ್ವಜವು ೪೫ ಅಡಿ ಅಗಲ ಮತ್ತು ೨೦ ಅಡಿ ಉದ್ದ ಇರಲಿದೆ.
ರಾಷ್ಟ್ರಧ್ವಜಸ್ತಂಭ ನಿರ್ಮಾಣದ ಪ್ರಥಮ ಸ್ಥಾನ ಬೆಳಗಾವಿ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿ ಹಂಪಿ ವಿಜಯನಗರದಲ್ಲಿ ಅಳವಡಿಸಲಾಗಿರುವ ದ್ವಜಸ್ತಂಭವಿದೆ. ಮೂರನೇ ಅತೀ ದೊಡ್ಡ ಧ್ವಜಸ್ತಂಭ ಪುತ್ತೂರಿನಲ್ಲಿ ನಿರ್ಮಾಣವಾಗಲಿದ್ದು ನಾಲ್ಕನೇ ಸ್ಥಾನದಲ್ಲಿ ಮಂಗಳೂರಿನಲ್ಲಿರುವ ಧ್ವಜಸ್ತಂಭವಿದೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.