ರಾಜ್ಯದ ಮೊದಲ ‘ಡಿಜಿಟಲ್ ಲೈಟಿಂಗ್ ಟ್ರೀ ಪಾರ್ಕ್’

ಬಣ್ಣದ ಬೆಳಕಿನ ‘ದೃಶ್ಯಕಾವ್ಯವಾಗಲಿದೆ ಪುತ್ತೂರ ಬಿರುಮಲೆಗುಡ್ಡ…!
ಪುತ್ತೂರು; ಅದೊಂದು ಪುತ್ತೂರು ನಗರದ ಅತೀ ಎತ್ತರದ ಗುಡ್ಡ. ಇದರ ತುದಿಯಲ್ಲಿ ನಿಂತು ನೋಡಿದರೆ ಪುತ್ತೂರು ನಗರವನ್ನು ಕಣ್ ತುಂಬಿಕೊಳ್ಳಬಹುದು. ಜನತೆಯನ್ನು ಸೆಳೆಯುವ ಸುಂದರ ನೋಟದ ಪ್ರದೇಶ. ಇಂತಹ ಗುಡ್ಡದಲ್ಲಿ ಇದೀಗ ಶಾಸಕ ಅಶೋಕ್ ರೈ ಅವರ ಕನಸಿನ ಜಗಮಗಿಸುವ ಲೈಟಿಂಗ್ ವ್ಯವಸ್ಥೆಯು ಕಾರ್ಯಾರಂಭಗೊಂಡಿದೆ. ಇಡೀ ಪುತ್ತೂರನ್ನು ಮಾತ್ರವಲ್ಲ ಪುತ್ತೂರಿಗೆ ಬರುವ ಎಲ್ಲರನ್ನೂ ಸೆಳೆಯುವಂತೆ ಈ ಆಕರ್ಷಕ ಬಣ್ಣ ಬಣ್ಣದ ಚಿತ್ತಾರಗಳ ಬೆಳಕು ಮೂಡಿಬರಲಿದೆ. ಸುಮಾರು ೨೦೦ ಹೆಚ್ಚು ಫೋಕಸ್ ಲೈಟ್ ಗಳನ್ನು ಮರಗಳ ಬುಡದಲ್ಲಿ ಮೇಲ್ಮುಖವಾಗಿ ಬೆಳಕು ಹೊಮ್ಮುವಂತೆ ಅಳವಡಿಸಿ ಇಡೀ ಗುಡ್ಡವನ್ನೇ ಮನಮೋಹಕ ನೆಲೆಯನ್ನಾಗಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಪುತ್ತೂರು ಹೆಮ್ಮೆ ಪಡುವಂತೆ ನಾಡಿನ ಜನರನ್ನು ಸೆಳೆಯುವ ಈ ಗುಡ್ಡವೇ ಪುತ್ತೂರಿನ ಬಿರುಮಲೆಗುಡ್ಡ..!


ರಾಜ್ಯದಲ್ಲೇ ಮೊದಲ ಡಿಜಿಟಲ್ ಲೈಟಿಂಗ್ ಟ್ರೀ ಪಾರ್ಕ್
ಇಟಲಿ ಹಾಗೂ ಜರ್ಮನಿಯೂ ಸೇರಿದಂತೆ ಯುರೋಪ್ ದೇಶಗಳ ಪಾರ್ಕಿನಲ್ಲಿ ಅಳವಡಿಕೆ ಮಾಡಿರುವ ಈ ‘ಡಿಜಿಟಲ್ ಲೈಟಿಂಗ್ ಟ್ರೀ’ಯನ್ನು ಪುತ್ತೂರಿಗೆ ತರುವ ಕನಸು ಹೊತ್ತವರು ಶಾಸಕ ಅಶೋಕ್ ರೈ. ವಿದೇಶದಲ್ಲಿ ಜನರನ್ನು ಆಕರ್ಷಿಸುತ್ತಿರುವ ಈ ಲೈಟಿಂಗ್ ವ್ಯವಸ್ಥೆಯನ್ನು ಪುತ್ತೂರಿನ ಬಿರುಮಲೆ ಗುಡ್ಡಕ್ಕೆ ಅಳವಡಿಕೆ ಮಾಡಿದರೆ ಈ ಪ್ರದೇಶವೇ ದೊಡ್ಡ ಪ್ರವಾಸಿತಾಣವಾಗುತ್ತದೆ ಎಂಬ ಹಿನ್ನಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಿರುಮಲೆ ಗುಡ್ಡದಲ್ಲಿ ಏಕಕಾಲಕ್ಕೆ ೪ ಡಿಜಿಟಲ್ ಲೈಟಿಂಗ್ ಟ್ರೀ ಗಳ ಅಳವಡಿಕೆ ಮಾಡಲಾಗುತ್ತಿದೆ. ಟವರ್ ಮಾದರಿಯಲ್ಲಿ ನಿರ್ಮಿಸಿರುವ ಈ ಆಕೃತಿಗಳ ಕಾಮಗಾರಿ ಮುಗಿದಿದ್ದು, ಇದರ ತುಂಬಾ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಕೆ ಮಾಡುವ ಕೆಲಸ ನಡೆಯುತ್ತಿದೆ.
೪.೮೫ ಕೋಟಿ ಅನುದಾನ
ಬಿರುಮಲೆ ಗುಡ್ಡದಲ್ಲಿ ಈಗಾಗಲೇ ಗಾಂಧೀಮಂಟಪ ಇದೆ. ಇದರ ಜತೆಗೆ ಅರಣ್ಯ ಇಲಾಖೆ ನಿರ್ಮಿಸಿದ ಸಾಲುಮರದ ತಿಮ್ಮಕ್ಕ ಪಾರ್ಕ್ ರೂಪುಗೊಂಡಿದೆ. ಹಾಗಿದ್ದರೂ ಇದೊಂದು ಆಕರ್ಷಣೆಯ ಕೇಂದ್ರವಾಗಿ ಪರಿವರ್ತನೆಯಾಗಿಲ್ಲ. ಆದರೆ ಸರ್ಕಾರದಿಂದ ೨ ಕೋಟಿ ಅನುದಾನ ತಂದಿರುವ ಶಾಸಕರು ಇದನ್ನು ಕನಸಿನ ಅರಮನೆಯನ್ನಾಗಿಸುವ ನಿಟ್ಟಿನಲ್ಲಿ ಬಿರುಮಲೆಗುಡ್ಡವನ್ನು ಬೆಳಕಿನ ‘ದೃಶ್ಯಕಾವ್ಯವನ್ನಾಗಿ ಪಡಿಮೂಡಿಲು ಮುಂದಾಗಿದ್ದಾರೆ. ಕೇವಲ ಗುಡ್ಡವನ್ನು ಮಾತ್ರವಲ್ಲ. ಬಿರುಮಲೆಗುಡ್ಡಕ್ಕೆ ಹೋಗುವ ದಾರಿಯುದ್ದಕ್ಕೂ ಬೀದಿದೀಪಗಳ ಅಳವಡಿಕೆ, ಇಲ್ಲಿಗೆ ಬರುವ ರಸ್ತೆಯ ಅಭಿವೃದ್ಧಿ, ಗುಡ್ಡದಲ್ಲಿನ ವೇದಿಕೆಯ ಹಿಂಭಾಗದಲ್ಲಿ ದೊಡ್ಡ ಸ್ಕ್ರೀನ್ ಅಳವಡಿಕೆ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಒಟ್ಟು ೪.೮೫ ಕೋಟಿ ಅನುದಾನದ ವಿನಿಯೋಗದೊಂದಿಗೆ ಬಿರುಮಲೆಗುಡ್ಡ ಪ್ರವಾಸೋದ್ಯಮಕ್ಕೆ ದೊಡ್ಡ ಬೆಂಚ್ ಮಾರ್ಕ್ ಆಗಲಿದೆ.
ಪುತ್ತೂರಿನ ದರ್ಬೆ ವೃತ್ತದಿಂದ ಬಿರುಮಲೆ ಗುಡ್ಡಕ್ಕೆ ದಾರಿ ಇದೆ. ಮಾಣಿಮೈಸೂರು ರಸ್ತೆಯಿಂದ ಬರುವ ಎಲ್ಲರಿಗೂ ಈ ಬಣ್ಣ ಬಣ್ಣದ ಬೆಳಕಿನರಮನೆ ಕಣ್ ಸೆಳೆಯಲಿದೆ. ಇದರೊಂದಿಗೆ ಬಿರುಮಲೆಗುಡ್ಡಕ್ಕೆ ಬರುವ ಮಂದಿಗೆ ಅನುಕೂಲವಾಗುವಂತೆ ಇಲ್ಲಿ ವ್ಯಾಪಾರ ಮಳಿಗೆಗಳ ನಿರ್ಮಾಣವೂ ಆಗಲಿದೆ. ಬಂದೋಬಸ್ತಿಗಾಗಿ ಪೊಲೀಸ್ ಸಿಬಂದಿಗಳ ವ್ಯವಸ್ಥೆಯನ್ನೂ ಮಾಡಲಾಗುವುದು. ಮಕ್ಕಳ ಆಟಕ್ಕೆ ಬೇಕಾದ ವ್ಯವಸ್ಥೆಯೂ ಸೇರಿದಂತೆ ಕುಟುಂಬ ಸಮೇತ ಈ ಗುಡ್ಡ ಬರುವಂತಾಗಲೂ ಬೇಕಾದ ಎಲ್ಲಾ ತರದ ವ್ಯವಸ್ಥೆಗಳನ್ನು ಮಾಡುವ ಚಿಂತನೆ ಇದರೊಂದಿಗಿದೆ. ಇದೆಲ್ಲಾ ನಡೆದಾಗ ಬಿರುಮಲೆಗುಡ್ಡ ಪುತ್ತೂರಿನ ದೊಡ್ಡ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಡಿಜಿಟಲ್ ಲೈಟಿಂಗ್ ಟ್ರೀ ಅಳವಡಿಕೆಯ ಮೂಲಕ ಬಿರುಮಲೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಗೋಲಗುಂಬಜ್ ಮಾದರಿ ‘ಧ್ಯಾನಮಂದಿರ’


ಡಿಜಿಟಲ್ ಲೈಟಿಂಗ್ ಟ್ರೀ ವ್ಯವಸ್ಥೆಯನ್ನು ವಿದೇಶದಲ್ಲಿ ನೋಡಿದ್ದೆ. ಆಗಲೇ ಬಿರುಮಲೆಗುಡ್ಡದ ಕನಸು ಆರಂಭವಾಗಿತ್ತು. ಈ ಗುಡ್ಡ ಪುತ್ತೂರಿನ ಅತೀ ದೊಡ್ಡ ಪ್ರೇಕ್ಷಣೀಯ ಸ್ಥಳವಾಗಬೇಕು ಎಂಬುವುದು ನನ್ನ ಚಿಂತನೆ. ರಾಜ್ಯದ ಮೊದಲ ಡಿಜಿಟಲ್ ಲೈಟಿಂಗ್ ಟ್ರೀ ಪಾರ್ಕ್ ಇದಾಗಿದೆ. ಅದರ ಜತೆಗೆ ಈ ಗುಡ್ಡದ ತುತ್ತತುದಿಯಲ್ಲಿ ಗೋಲಗುಂಬಜ್ ಮಾದರಿಯಲ್ಲಿ ಧ್ಯಾನಮಂದಿರ ನಿರ್ಮಿಸಬೇಕು. ಇಲ್ಲಿಗೆ ಬಂದು ಓದುವವರಿಗೆ, ಲೇಖಕರಿಗೆ ಅನುಕೂಲವಾಗುವಂತೆ ಇದನ್ನು ನಿರ್ಮಿಸಬೇಕು. ಯೋಗ-ಧ್ಯಾನ ಮಾಡುವವರಿಗೂ ಇದು ತಾಣವಾಗಬೇಕು. ಈ ಮಂದಿರದಲ್ಲಿ ಗ್ರಂಥಾಲಯ ಇರಬೇಕು. ಈಗಾಗಲೇ ನಿರ್ಮಿತವಾದ ಬಿರುಮಲೆಗುಡ್ಡದ ವೇದಿಕೆಯ ಮುಂಭಾಗದಲ್ಲಿ ದೊಡ್ಡ ಸಭಾಂಗಣ ನಿರ್ಮಾಣವಾಗಬೇಕು. ಇದಕ್ಕೆ ಸುಮಾರು ೫ ಕೋಟಿ ವೆಚ್ಚವಾಗಬಹುದು. ಮುಂದಿನ ವರ್ಷದ ಅನುದಾನದಲ್ಲಿ ಈ ಎಲ್ಲಾ ಕೆಲಸ ನಡೆಯಲಿದೆ- ಅಶೋಕ್ ರೈ ಶಾಸಕರು.

ಮೇಘಾ ಪಾಲೆತ್ತಾಡಿ