ರಾಜ್ಯದಲ್ಲೇ ಮೊದಲ ಪುಡಾ ಅದಾಲತ್ಬಡವರ ಸಮಸ್ಯೆಗೆ ಪರಿಹಾರ-ಅಶೋಕ್ ರೈ


ಪುತ್ತೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಪುಡಾ ಅದಾಲತ್ ಮಾಡುವ ಮೂಲಕ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಏಕನಿವೇಶನ ಅರ್ಜಿಗಳ ಗೊಂದಲ ನಿವಾರಣೆ ಮತ್ತು ೪ಕೆ ನಿಯಮಾವಳಿಗಳು ಜಾರಿಗೊಳ್ಳುವ ಮೊದಲು ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಈ ಮೂಲಕ ಬಡವರ್ಗದ ಜನತೆಯ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಲಾಗುತ್ತಿದೆ. ಇದು ರಾಜ್ಯಕ್ಕೇ ಮಾದರಿಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ವರು ಮಂಗಳವಾರ ಶಾಸಕರ ಕಚೇರಿಯ ಸಭಾಂಗಣದಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಅದಾಲತ್ ಮತ್ತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಡಬ ಮತ್ತು ಪುತ್ತೂರು ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಸಲ್ಲಿಸಲಾದ ೯/೧೧ ಅರ್ಜಿಗಳಲ್ಲಿ ದಾಖಲೆಗಳ ಕೊರತೆ ಇದ್ದ ಅರ್ಜಿಗಳನ್ನು ಇಲ್ಲಿ ವಿಲೇವಾರಿ ಮಾಡಲಾಗುತ್ತದೆ. ೫೫೬ ಅರ್ಜಿಗಳಲ್ಲಿ ದಾಖಲಾತಿಯ ಕೊರತೆ ಇದೆ. ಇದರಲ್ಲಿ ಕೇವಲ ೨೫೦ ಮಂದಿ ಮಾತ್ರ ದಾಖಲೆ ಒದಗಿಸಿದ್ದಾರೆ. ಉಳಿದವರು ಯಾವುದೇ ಆಸಕ್ತಿ ತೋರಿಸಿಲ್ಲ. ಮುಂದೆ ೯/೧೧ ಮಾಡದಿದ್ದರೆ ಮುಂದಿನ ಪೀಳಿಗೆಗೆ ಸರಿಯಾದ ರಸ್ತೆ ಸಿಗಲಾರದು. ಮನೆಗಳಿಗೆ ಡೋರ್ ನಂಬರ್, ಕರೆಂಟ್ ಬಿಲ್ ಸಿಗುವುದಿಲ್ಲ. ಈಗ ಸ್ವಲ್ಪ ಕಷ್ಟವಾದರೂ ಇದರಿಂದ ಅಭಿವೃದ್ಧಿ ಹಾಗೂ ಯೋಜನೆಗಳ ಅನುಷ್ಟಾನಕ್ಕೆ ಪ್ರಯೋಜನವಾಗಲಿದೆ ಎಂದವರು ತಿಳಿಸಿದರು.
ಗ್ರಾಮವಾಸ್ತವ್ಯ ಅದಾಲತ್ ಮನೆ ಬಾಗಿಲಿಗೆ..
ಮುಂದೆ ಕಂದಾಯ ಇಲಾಖೆ, ನಗರಸಭೆಗಳ ಅದಾಲತ್, ಗ್ರಾಮ ವಾಸ್ತವ್ಯದ ಮೂಲಕವೂ ಕಡತಗಳ ವಿಲೇವಾರಿ ಮಾಡಲಾಗುವುದು. ಪುಡಾದಲ್ಲಿ ೨ ಸಿಬಂದಿ ನೇಮಕಕ್ಕೆ ಸರ್ಕಾರದಿಂದ ಆದೇಶ ಆಗಿದೆ. ಪುಡಾಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಯೋಜನೆ ಇದೆ. ಪುಡಾದ ಸುಮಾರು ೬ ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿ, ಸರ್ಕಲ್ ನಿರ್ಮಾಣ, ರಾಷ್ಟ್ರ ಧ್ವಜ ನಿರ್ಮಾಣ ಮಾಡಲಾಗುತ್ತದೆ. ೧ ಕೋಟಿಯಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು, ಜಿಮ್ ವ್ಯವಸ್ಥೆಗೆ ೧ ಕೋಟಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ೯/೧೧ ಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಬದಲಾವಣೆ ತಂದಾಗ ಗೊಂದಲ ಉಂಟಾಗಿದೆ. ನಮ್ಮಲ್ಲಿ ಪೆಂಡಿಂಗ್ ಫೈಲ್‌ಗಳು ೨೦ ಮಾತ್ರ ಇದ್ದು, ಶೇ.೫೭ ರಷ್ಟು ಅರ್ಜಿಗಳು ವಿಲೇವಾರಿಯಾಗಿವೆ. ಮುಂದೆ ಪ್ರತಿ ೬ ತಿಂಗಳಿಗೊಮ್ಮೆ ಅದಾಲತ್ ಮಾಡಿ ಅರ್ಜಿಗಳ ತ್ವರಿತ ವಿಲೇವಾರಿ ಮಾಡಲಾಗುವುದು. ಪುತ್ತೂರಿನಲ್ಲಿ ಜನರ ಬಳಿಗೆ ಹೋಗುವ ಪ್ರಾಧಿಕಾರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
೨೦೨೫ರ ಮೇ ೭ ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ನಿವೇಶನ, ಬಹುನಿವೇಶನ, ಕಟ್ಟಡಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಸಂಬಂಧ ೪ ಕೆ ನಿಯಮಗಳನ್ನು ನಿರೂಪಿಸಲಾಗಿದೆ. ಈ ನಿಯಮಾವಳಿಯಂತೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲು ಕೆಲವೊಂದು ಗೊಂದಲಗಳು ಹಾಗು ನಿಯಮವಳಿಗಳ ಅಂಶಗಳನ್ನು ಅರ್ಥೈಸಿಕೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಿಸಿ ಈ ಅದಾಲತ್ ಅನ್ನು ಆಯೋಜಿಸಲಾಗಿದೆ ಎಂದರು. ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ. ಶೆಟ್ಟಿ, ಅನ್ವರ್ ಖಾಸಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಲ್ಯಾನ್ಸಿ ಮಸ್ಕರೇನಸ್ ವಂದಿಸಿದರು. ಬಳಿಕ ಸಾಂಕೇತಿಕವಾಗಿ ೯/೧೧ ಅರ್ಜಿ ಸಲ್ಲಿಸಿದವರಿಗೆ ಆದೇಶ ಪತ್ರ ವಿತರಿಸಲಾಯಿತು. ದಿನವಿಡೀ ಅರ್ಜಿಗಳ ವಿಲೇವಾರಿ ನಡೆಯಿತು.