ರಾಜ್ಯದಲ್ಲಿ ಕಾಂಗ್ರೆಸ್ ಜನ ವಿರೋಧಿ ಸರ್ಕಾರ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ನ.24:
– ರಾಜ್ಯವನ್ನು ಆಳಿದ ಹಲವು ಮುಖ್ಯಮಂತ್ರಿಗಳು ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಲು ವಿಫಲರಾದರು, ಆದರೆ ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಪ್ರಾದೇಶಿಕ ಪಕ್ಷ 25 ವರ್ಷ ಅಸ್ಥಿತ್ವದಲ್ಲಿರುವುದು ಸಾಧನೆಯಾಗಿದು ಇದಕ್ಕೆಲ್ಲ ಕಾರಣ ಜೆಡಿಎಸ್ ಪಕ್ಷದ ಕಾರ್ಯಕರ್ತರು ಎಂದು ಮಾಜಿ ಶಾಸಕ ಕೆ. ಮಹದೇವ್ ತಿಳಿಸಿದರು.
ತಾಲೂಕಿನ ಬಸವೇಶ್ವರ ಸರ್ಕಲ್ ಬಳಿ ಆಯೋಜಿಸಿದ ಜೆಡಿಎಸ್ ಪಕ್ಷದ ಬೆಳ್ಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಳೆದೆರಡು ದಶಕದಿಂದ ಹಲವು ಪ್ರಾದೇಶಿಕ ಪಕ್ಷಗಳು ಪ್ರಾರಂಭವಾಗಿ ನೆಲ ಕಚ್ಚಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಸವಾಲುಗಳ ನಡುವೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ.


ಈಗ ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಜನರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಅಧಿಕಾರಕ್ಕಾಗಿ ಕಿತ್ತಾಟವನ್ನು ಮಾಡುತ್ತಿದ್ದಾರೆ,
ಆದರೆ ಜೆಡಿಎಸ್ ಪಕ್ಷ ರಾಜ್ಯದ ನೆಲ, ಜಲದ ರಕ್ಷಣೆ ಜೊತೆಗೆ ನಾಡಿನ ರೈತರ, ದೀನದಲಿತರ ದನಿಯಾಗಿ ಜೆಡಿಎಸ್ ಪಕ್ಷ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರೈಸಿದ ಏಕೈಕ ಪ್ರಾದೇಶಿಕ ಪಕ್ಷವಾಗಿದು.ಎಚ್.ಡಿ.ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಗಳಾಗಿ ಗ್ರಾಮ ವಾಸ್ತವ್ಯದ ಮೂಲಕ ಜನಸಾಮಾನ್ಯರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹರಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ನಿರಂತರವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಒಳಗಾದಾಗ ರಾಜ್ಯಾದ್ಯಂತ ಸಂಚರಿಸಿ ರೈತರಿಗೆ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದ್ದಲ್ಲದೇ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೊಡನೇ ರೈತ ಸಾಲಮನ್ನಾ ಮಾಡಿ ರೈತರಿಗೆ ಬೆನ್ನೆಲುಬಾಗಿ ನಿಂತರು ಎಂದು ಸ್ಮರಿಸಿದರು.ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ರಾಜ್ಯದ ಜನರು ಬೆಂಬಲಿಸುವ ನಿರೀಕ್ಷೆಯೊಂದಿಗೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷದ ಬಲವರ್ಧನೆಗೆ ಮುಂದಾಗುತ್ತಿದ್ದೇವೆ. ಪಕ್ಷಕ್ಕೆ ಭವಿಷ್ಯದಲ್ಲಿ ಉತ್ತಮ ಬುನಾದಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಂತರ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಣ್ಣಯ್ಯ ಶಟ್ರು ಮಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ವಿವಿಧ ಚಟುವಟಿಕೆಗಳು ಆರಂಭವಾಗಲಿವೆ. ಪಕ್ಷದ ಸದಸ್ಯತ್ವ, ಪದಾಧಿಕಾರಿಗಳ ನೇಮಕ ಸೇರಿದಂತೆ ಪಕ್ಷ ಸಂಘಟನೆಯ ಕೆಲಸಗಳು ನಡೆಯಲಿವೆ. ಅದರಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆದ್ದು ಸರ್ಕಾರ ರಚಿಸಲಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜವರಪ್ಪ ,ಅತ್ತರ್ ಮತಿನ್ ,ರೇಣುಕಾ ಸ್ವಾಮಿ ,ರಾಮಚಂದ್ರ, ಸ್ವಾಮಿ, ಸೋಮಶೇಖರ್ ,ನಾಗರಾಜು, ಮಂಜುನಾಥ್ ಸಿಂಗ್ ,ನಿರಂಜನ್, ನವೀನ್, ತಿಮ್ಮ ನಾಯ್ಕ, ಮುತ್ತುರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.