ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.9- ಕೈಯಲ್ಲಿ ದುಡ್ಡಿಲ್ಲದ ಕಾಲದಲ್ಲಿ, ಸಹಾಯಹಸ್ತ ಚಾಚುವವರು ಯಾರು ಇಲ್ಲದ ಸಂದರ್ಭದಲ್ಲಿ ಚಿನ್ನದ ಕರಡಿಗವನ್ನೇ ಮಾರಾಟ ಮಾಡಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಲಕ್ಷಾಂತರ ಜನಕ್ಕೆ ಶಿಕ್ಷಣ ನೀಡಿದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಕೊಡುಗೆ ಶಿಕ್ಷಣ ಕ್ಷೇತ್ರದಲ್ಲಿನ ಚರಿತ್ರೆಯಲ್ಲಿ ಉಳಿದಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣಿಸಿದರು.
ಪಟ್ಟಣದ ವಿಧ್ಯೋದಯ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ನಂತರದ ದೇಶದಲ್ಲಿದ್ದ ಶೇ.8 ರಷ್ಟು ಸಾಕ್ಷರತೆ ಪ್ರಮಾಣ ಶೇ.75ಕ್ಕೆ ಏರಿಕೆಯಾಗಲು ಜ್ಞಾನಾರ್ಜನೆಯ ಮೂಲಕ ಜನರನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೋಯ್ದ ರಾಜೇಂದ್ರ ಶ್ರೀಗಳಂತಹವರ ಸಾಧನೆ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಸುತ್ತೂರು ಮಠ ಎಂದೆದಿಗೂ ಜಾತಿ, ಧರ್ಮದ ಮೇಲೆ ನಿಂತಿಲ್ಲ. ಸೌಹಾರ್ದತೆ ಮತ್ತು ಸರ್ವಪಕ್ಷಗಳ ನಾಯಕರ ಹಾಗೂ ಜನರ ಸಂಗಮದ ಸಂಕೇತವಾಗಿ ಪ್ರತಿ ವರ್ಷವೂ ಜಾತ್ರೋತ್ಸವ ಆಯೋಜನೆಗೊಳ್ಳುತ್ತದೆ. ಅಂತಹ ಹಿನ್ನೆಲೆಯ ಮಠಕ್ಕೆ 12ನೇ ವಯಸ್ಸಿನಲ್ಲಿ ಪೀಠವನ್ನು ಅಲಂಕರಿಸಿದ ರಾಜೇಂದ್ರ ಸ್ವಾಮೀಜಿಯವರು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕ್ಷೇತ್ರವನ್ನಾಗಿ ಮಾಡಿದರು. ನುಡಿದಂತೆ ನಡೆದು, ನಡೆದಂತೆ ನುಡಿಯುವ ವ್ಯಕ್ತಿತ್ವವನ್ನು ಹೊಂದಿದ್ದ ಅವರು ನಮ್ಮವರು, ನಮ್ಮೂರಿನವರು ಅನ್ನೋದೇ ಹೆಮ್ಮೆ. ಅಕ್ಷರ ದಾಸೋಹ, ಸಾಂಸ್ಕೃತಿಕ ನಡೆ ನುಡಿಗಳ ಮೂಲಕ ದೇಶಕ್ಕೆ ಮಾದರಿ ಶ್ರೀ ಗಳಾಗಿ ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಾಡಿನಲ್ಲಿ ಶೈಕ್ಷಣಿಕ ಪ್ರಗತಿಯನ್ನು ಕಾಣಲು ಲಿಂಗಾಯತ ಮಠಮಾನ್ಯಗಳ ಕಾರವಾಗಿವೆ. ಮಠಗಳಲ್ಲಿ ಅಕ್ಷರ ದಾಸೋಹವನ್ನು ಆರಂಭಿಸದಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷಣವನ್ನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ವಿದ್ಯಾಭ್ಯಾಸ ಮತ್ತು ಅಕ್ಷರ ಸಂಸ್ಕೃತಿಯಿಂದ ದಲಿತರು ಹಾಗೂ ಹಿಂದುಳಿದ ವರ್ಗಗಳನ್ನು ದೂರವಿಟ್ಟಿದ್ದ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿದ ಮಠಾಧೀಶರು ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನ ಮಠಗಳಲ್ಲಿ ಆರಂಭಿಸಿದ್ದರು. ಆರ್ಥಿಕ ಸುಧಾರಣೆ ಇಲ್ಲದಂತಹ ಕಾಲದಲ್ಲಿ ರಾಜೇಂದ್ರ ಶ್ರೀಗಳು ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು ದೊಡ್ಡ ಕ್ರಾಂತಿ ಆಗಿದೆ. ಸುತ್ತೂರು ಮಠ ಧಾರ್ಮಿಕತೆಯಷ್ಟೇ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಸಾಧನೆಯನ್ನ ಮಾಡಿ, ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಎಂದು ತಿಳಿಸಿದರು.
ವೈಭವದ ಮೆರವಣಿಗೆ: ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ದಶೋತ್ತರ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಿಂದ ಅಲಂಕರಿಸಿದ ತೆರೆದ ವಾಹನಗಳಲ್ಲಿ ಶ್ರೀಗಳ ಭಾವಚಿತ್ರ ಹಾಗೂ ಶ್ರೀ ಬಸವೇಶ್ವರರ ಪುತ್ತಳಿಯನ್ನ ಕಾಲೇಜು ವೃತ್ತದ ವರೆಗೆ ಮೆರವಣಿಗೆ ನಡೆಸಲಾಯಿತು. ಕಾಲೇಜಿನ ಪ್ರವೇಶ ದ್ವಾರದಲ್ಲಿಯೂ ರಾಜೇಂದ್ರ ಶ್ರೀಗಳ ಪುತ್ತಳಿಯನ್ನ ವಿಶೇಷವಾಗಿ ಅಲಂಕರಿಸಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಸಮಾರಂಭದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ದಿನೇಶ್ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಮ್ಮತಹಳ್ಳಿ ಪಾಂಡುಮಟ್ಟಿ ಮಠದ ಗುರುಬಸವ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಗ್ರಾಮ ವಿದ್ಯೋದಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ, ಎಂ ಎಲ್ ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಇಮ್ಮಡಿ ಶಿವಕುಮಾರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ನಂದಿಕೇಶ್ವರ ಸ್ವಾಮೀಜಿ, ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಹೇಳವರಹುಂಡಿ ಸಿದ್ದಪ್ಪ, ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ. ಶಿವಶಂಕರ್, ನಿರ್ದೇಶಕ ದೊಡ್ಡನಹುಂಡಿ ನಂಜುಂಡಸ್ವಾಮಿ, ಬಸವ ಬಳಗದ ಅಧ್ಯಕ್ಷ ಪರಮೇಶ್ ಪಟೇಲ್, ಶಿಕ್ಷಕಿ ಜ್ಯೋತಿ ಪರಮೇಶ್, ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ಸಂಚಾಲಕ ಮಾಯಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ, ಚಂದ್ರದರ, ಕುಮಾರ, ಮುಖಂಡರಾದ ತುರುಗನೂರು ಮಲ್ಲೇಶ, ಬಸಪ್ಪ, ಗುರುಸ್ವಾಮಿ, ನಾಗಭೂಷಣ, ಅದೃಷ್ಟ ಮಾದಪ್ಪ, ಗುರುಮಲ್ಲಪ್ಪ ಹಾಗೂ ಇತರರು ಇದ್ದರು.




























