
ಸಂಜೆವಾಣಿ ನ್ಯೂಸ್
ಮೈಸೂರು, ಜ.06:- ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಡ್ರಾಗನ್ ಪಾಂಡ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ ಅವರು ಮಾತನಾಡಿ ಮುಖ್ಯಮಂತ್ರಿಗಳಿಗೆ ಮೈಸೂರು ಜಿಲ್ಲೆಯ ಮೇಲೆ ಇರುವ ಪ್ರೀತಿಯಿಂದ ಮೈಸೂರು ಜಿಲ್ಲೆಯನ್ನು ವಿಭಿನ್ನವಾಗಿ ಅಭಿವೃದ್ಧಿ ಪಡಿಸಿರುತ್ತಾರೆ ಎಂದರು.
ಮುಖ್ಯಮಂತ್ರಿಗಳು ನ್ಯಾಯ, ಬಡವರು ಹಾಗೂ ಅಭಿವೃದ್ಧಿಯ ಪರ. ಗ್ರಾಮೀಣ ಜೀವನ ಎಂದರೆ ಮುಖ್ಯಮಂತ್ರಿಗಳಿಗೆ ಅಚ್ಚುಮೆಚ್ಚು. ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ ಎಂದರು.
Tiger face with a tender heart ಎಂದು ಮುಖ್ಯಮಂತ್ರಿಗಳನ್ನು ಬಣ್ಣಿಸಿದರು. ಅವರು ತಮ್ಮ ದಿಟ್ಟ ನಿರ್ಧಾರಗಳಿಂದ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರು ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲೂ ಪ್ರತಿದಿನ ನನಗೆ ಕರೆ ಮಾಡಿ ಮೈಸೂರಿನ ಸ್ಥಿತಿಗತಿಗಳ ಬಗ್ಗೆ ವಿಚಾರಿಸುತ್ತಾರೆ. ಇದು ಅವರಿಗೆ ಮೈಸೂರಿನ ಮೇಲೆ ಇರುವ ಪ್ರೀತಿಗೆ ಸಾಕ್ಷಿ ಎಂದರು.
ಮಾನ್ಯ ಮುಖ್ಯಮಂತ್ರಿಗಳ ಸಾಧನೆ ಕುರಿತು ಲೇಸರ್ ಶೋ ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ: ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.


























