Home ಜಿಲ್ಲೆ ಮೈಸೂರು ರಾಜಕಾರಣಿಗಳ ವರ್ತನೆ ಮುಜುಗರ ತರಿಸುತ್ತಿದೆ

ರಾಜಕಾರಣಿಗಳ ವರ್ತನೆ ಮುಜುಗರ ತರಿಸುತ್ತಿದೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.22:-
ಪ್ರಸ್ತುತ ರಾಜಕಾರಣಿಗಳು ಶಾಸನ ಸಭೆಗಳಲ್ಲಿ ವರ್ತಿಸುತ್ತಿರುವ ರೀತಿ-ನೀತಿ ರಾಜ್ಯದ ಜನತೆಗೆ ಮುಜುಗರ ತರುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬೇಸರ ವ್ಯಕ್ತಪಡಿಸಿದರು.


ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಧಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ರಾಜ್ಯ ಘಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಮೈಸೂರು ವಿಶ್ವ ವಿದ್ಯಾನಿಲಯದ ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಶನಿವಾರ ನಡೆದ ಜನಕವಿ ಸಿದ್ದಲಿಂಗಯ್ಯ ಜನ್ಮ ದಿನಾಚರಣೆಯ ಅಂಗವಾಗಿ ಹೊಲೆ ಮಾದಿಗರ ಹಾಡು ಕೃತಿಯ 50ರ ಸಂಭ್ರÀಮ ಮತ್ತು ದಲಿತ ಸಾಹಿತ್ಯ ಪರಿಷತ್‍ನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರು ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ವಿಧಾನ ಪರಿಷತ್ತಿನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಇಂದಿನ ರಾಜಕಾರಣಿಗಳು ಶಾಸನ ಸಭೆಯಲ್ಲಿ ಹೇಗೆ ಮಾತನಾಡಬೇಕು ಎಂಬ ಆದರ್ಶ ರೂಢಿಸಿಕೊಳ್ಳಲು ಸದನದಲ್ಲಿ ಸಿದ್ದಲಿಂಗಯ್ಯ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಕಾಲಹರಣಕ್ಕಾಗಿ ಉಡಾಫೆಯಿಂದ ಅವರೆಂದಿಗೂ ಸದನದಲ್ಲಿ ಮಾತನಾಡಲಿಲ್ಲ. ತನ್ನ ಸಮುದಾಯದ ನೋವುಗಳನ್ನು ಎಲ್ಲ ಸಮುದಾಯದ ನೋವುಗಳಾಗಿ ಪರಿವರ್ತಿಸಿಕೊಂಡಿದ್ದರು. ದಲಿತ ಸಮುದಾಯದ ಬಿಡುಗಡೆಯೇ ಎಲ್ಲ ಬಡವರ ಬಿಡುಗಡೆಯಲ್ಲಿ ಅಡಗಿದೆ ಎನ್ನುತ್ತ ಪ್ರತಿ ವಿಚಾರವನ್ನೂ ಮಂಡನೆ ಮಾಡುತ್ತಿದ್ದರು. ಇಂದಿನ ಜನಪ್ರತಿನಿಧಿಗಳಿಗೆ ಇದು ಮಾದರಿಯಾಗಬೇಕು ಎಂದರು.


ಸಿದ್ದಲಿಂಗಯ್ಯ ಪ್ರತಿಕ್ಷಣ ಸಮುದಾಯದ ವಿಮೋಚನೆಗೆ ಪರಿತಪ್ಪಿಸುತ್ತಿದ್ದರು. ದೌರ್ಜನ್ಯವಾದಾಗ ಸಂಕಷ್ಟ ಅನುಭÀವಿಸುತ್ತಿದ್ದರು. ದಲಿತ ಚಳವಳಿಯ ಹೋರಾಟವೂ ಬಡವರ, ತುಳಿತಕ್ಕೆ ಒಳಗಾದವರ, ದಮನಿತ ಸಮುದಾಯಗಳ ಒಂದಾಗುವ ಮೂಲಕ ವಿಮೋಚನೆ ಹೋರಾಟವಾಗಿ ಮುಂದುವರಿಸಬೇಕು ಎಂಬ ಆಶಯ ಹೊಂದಿದ್ದರು ಎಂದರು.
1975ರಲ್ಲಿ ಬರೆದ ಹೊಲೆ ಮಾದಿಗರ ಹಾಡು ರಾಜ್ಯ ಹೋರಾಟಗಳಿಗೆ ಜೀವ ತುಂಬಿತು. ಇಂದು ಸಿದ್ದಲಿಂಗಯ್ಯ ಅವರ ಹಾಡು ಕರ್ನಾಟಕದ ಜನಮಾನಸಗಳಲ್ಲಿ ತುಂಬಿದೆ. ಯಾವುದೇ ಹೋರಾಟ ಅವರ ಹಾಡುಗಳಿಲ್ಲದೆ ಪೂರ್ಣವಾಗುವುದಿಲ್ಲ. ಸಿದ್ದಲಿಂಗಯ್ಯ ಅವರ ಚಿಂತನೆಗಳನ್ನು ಜೀವಂತವಾಗಿರಿಸುವ ಕೆಲಸ ನಡೆಯಬೇಕು ಎಂದರು.


ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಸಿದ್ದಲಿಂಗಯ್ಯ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿ ಪ್ರತಿಯೊಬ್ಬರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಅವರ ಪುಸ್ತಕಗಳನ್ನು ಪ್ರತಿಯೊಬ್ಬರು ಓದಬೇಕು. ದಮನಿತರು, ಶೋಷಿತರ ಪರವಾಗಿ ಧ್ವನಿ ಎತ್ತುತ್ತಿದ್ದರು. ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಿಗಬೇಕು ಮತ್ತು ಸ್ವತ್ತು ಮತ್ತು ಸತ್ಯ ಪ್ರತಿಯೊಬ್ಬರ ಉಸಿರಾಗಬೇಕು ಎಂಬ ಆಶಯ ಅವರದಾಗಿತ್ತು. ಅವರ ಆಶಯಗಳು ಇಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಆದಿ ಕರ್ನಾಟಕ ಛಲವಾದಿ ಮಹಾಸಂಸ್ಥಾನ ಗುರುಪೀಠದ ಡಾ.ಜ್ಞಾನ ಸ್ವರೂಪಾನಂದ ಸ್ವಾಮೀಜಿ, ರಮಾ ಸಿದ್ದಲಿಂಗಯ್ಯ, ದಲಿತ ಸಾಹಿತ್ಯ ಪರಿಷತ್ ಸಂಯೋಜಕ ಡಾ.ಚಂದ್ರಗುಪ್ತ, ಹಿರಿಯ ರಂಗಕರ್ಮಿ ಜನಾರ್ದನ (ಜನ್ನಿ), ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ, ರಂಗಸ್ವಾಮಿ ಕಾಳಿಹುಂಡಿ, ವಿಶ್ವಪ್ರಸಾದ, ಹಿರಿಯ ಹೋರಾಟಗಾರ ಎಲ್.ಶಿವಲಿಂಗಯ್ಯ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪೆÇ್ರ.ಅಪ್ಪಗೆರೆ ಸೋಮಶೇಖರ್, ಮಲ್ಲಹಳ್ಳಿ ನಾರಾಯಣ, ಮೈಸೂರು ಸಂಶೋಧಕರ ಸಂಘದ ಮಾಜಿ ಅಧ್ಯಕ್ಷ ಬಿ.ಮೂರ್ತಿ ಇದ್ದರು.