
ಪುತ್ತೂರು: ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿರುವುದನ್ನು ವಿರೋಧಿಸಿ ತ್ಯಾಜ್ಯ ಸಾಗಾಟದ ಲಾರಿಯನ್ನು ತಡೆ ಹಿಡಿದ ಸ್ಥಳೀಯರ ಪ್ರತಿಭಟನಾ ಆಕ್ರೋಶಕ್ಕೆ ಮಣಿದು ೩ ದಿನಗಳ ಒಳಗೆ ರಸ್ತೆ ಬದಿ ತ್ಯಾಜ್ಯವನ್ನು ತೆರವುಗೊಳಿಸುವ ಭರವಸೆಯನ್ನು ಪೌರಾಯುಕ್ತರು ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಾಸುಪಡೆದುಕೊಂಡು ಘಟನೆ ಬನ್ನೂರಿನಲ್ಲಿ ನಡೆಯಿತು.
ಬನ್ನೂರಿನಲ್ಲಿ ವೈಜ್ಞಾನಿಕ ಘನತ್ಯಾಜ್ಯ ಸಂಸ್ಕರಣಾ ಘಟಕ ಇದ್ದರೂ ನಾಗರಕ್ತೇಶ್ವರಿ ದೇವಳಕ್ಕೆ ಹೋಗುವ ರಸ್ತೆ ಬದಿಯಲ್ಲಿ ಕಸ ಸಾಗಾಟದ ಲಾರಿಗಳು ತ್ಯಾಜ್ಯ ರಾಶಿ ಹಾಕುತ್ತಿದ್ದು, ಇದರಿಂದ
ಆಕ್ರೋಶಗೊಂಡ ಸ್ಥಳೀಯರು ಈ ಪ್ರತಿಭಟನೆ ನಡೆಸಿದರು. ಕಳೆದ ೬ ತಿಂಗಳಿನಿಂದ ಈ ಘಟನೆ ನಡೆಯುತ್ತಿದ್ದು, ಈ ಬಗ್ಗೆ ಕಸ ಸಾಗಾಟದ ಲಾರಿ ಚಾಲಕರಲ್ಲಿ ಈ ರೀತಿ ಮಾಡಬೇಡಿ ಎಂದು ತಿಳಿಸಿದ್ದರು. ನಗರಸಭೆಯ ಅಧಿಕಾರಿ ವರ್ಗಕ್ಕೂ ದೂರು ನೀಡಿದ್ದರು. ಆದರೆ ಇದನ್ನು ಲೆಕ್ಕಿಸದ ಲಾರಿ ಚಾಲಕರು ಮತ್ತೆ ಮತ್ತೆ ರಸ್ತೆ ಬದಿಯಲ್ಲಿಯೇ ಕಸದ ರಾಶಿ ಹಾಕುತ್ತಿದ್ದರು. ಈ ರಸ್ತೆ ಬದಿಯಲ್ಲಿ ಹಲವಾರು ಮನೆಗಳಿದ್ದು, ತ್ಯಾಜ್ಯದ ವಾಸನೆಯಿಂದ ಸಮಸ್ಯೆ ಉಂಟಾಗಿತ್ತು. ಸಂಜೆ ವೇಳೆ ತ್ಯಾಜ್ಯದಿಂದ ಸೊಳ್ಳೆಗಳ ಕಾಟವೂ ಅತಿಯಾಗಿದೆ. ಇದರಿಂದ ಪರಿಸರದ ಜನತೆಯ ಆರೋಗ್ಯದ ಮೇಲೂ ಪರಿಣಾಮ ಬೀರಿದೆ.
ಈ ಹಿನ್ನಲೆಯಲ್ಲಿ ಸ್ಥಳೀಯರು ತ್ಯಾಜ್ಯ ಸಾಗಾಟದ ಲಾರಿಯನ್ನು ತಡೆದಿದ್ದರು.
ಸ್ಥಳಕ್ಕೆ ಪೌರಾಯುಕ್ತೆ
ಸ್ಥಳೀಯರ ಆಕ್ರೋಶದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತೆ ವಿದ್ಯಾ ಕಾಳೆ ಅವರು ಘನತ್ಯಾಜ್ಯ ಘಟಕದಿಂದ ಕಸವನ್ನು ಸಿಮೆಂಟ್ ಫ್ಯಾಕ್ಟರಿಗೆ ಒಯ್ಯುವ ಕಾರಣದಿಂದ ಉಂಟಾದ ತೊಂದರೆಯ ಕಾರಣ ಕಸವನ್ನು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ತಕ್ಷಣ ಈ ರಸ್ತೆ ಬದಿಯಿಂದ ತ್ಯಾಜ್ಯ ತೆರವುಗೊಳಿಸಲಾಗುವುದು. ನಮಗೆ ೩ ದಿನಗಳ ಕಾಲ ಅವಕಾಶ ನೀಡಿ. ತೆರವು ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನೆ ವಾಪಾಸು ಪಡೆದುಕೊಳ್ಳಲಾಯಿತು.
ಈ ಸಂದರ್ಭ ಕಾರ್ತಿಕ್ ಕುಲಾಲ್ ನೆಕ್ಕಿಲ ಅವರು ಮಾತನಾಡಿ, ಈ ದೇವಸ್ಥಾನ ರಸ್ತೆಯ ಬದಿಯಲ್ಲಿ ಘಟಕದ ಹೊರಭಾಗದಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ನಗರಸಭೆಯ ಪೌರಾಯುಕ್ತರಿಗೂ ಈ ಬಗ್ಗೆ ದೂರು ನೀಡಿದ್ದೇವೆ. ಘಟಕದ ಒಳಗಿನ ತ್ಯಾಜ್ಯವನ್ನು ಹೊರಭಾಗದಲ್ಲಿ ಸುರಿಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಘಟಕದ ಒಳಗಿಂದ ನಿರಂತರವಾಗಿ ಕಸ ತಂದು ರಸ್ತೆ ಬದಿಯಲ್ಲಿ ಸುರಿಯುವುದನ್ನು ನಿಲ್ಲಿಸಲಿಲ್ಲ. ತ್ಯಾಜ್ಯ ಸಾಗಾಟದ ಲಾರಿ ಚಾಲಕರು ರಾಜಕಾಲುವೆಯಿಂದ ತಂದ ತ್ಯಾಜ್ಯವನ್ನೂ ಇಲ್ಲಿಯೇ ಸುರಿದು ಹೋಗುತ್ತಾರೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಈ ಬಗ್ಗೆ ನಗರಸಭೆಯ ಇಂಜಿನಿಯರ್ ಗೆ ಫೋನ್ ಮಾಡಿದರೆ ಉಢಾಪೆಯಾಗಿ ಮಾತನಾಡಿ ನೀವು ಪೊಲೀಸು ದೂರು ಕೊಡಿ ಎಂಬ ಉತ್ತರ ನೀಡುತ್ತಾರೆ. ಅಧಿಕಾರಿಗಳ ಎಸಿ ರೂಮಿನಿಂದ ಹೊರಬಂದು ಜನರ ಸಮಸ್ಯೆಯನ್ನು ನೋಡಬೇಕು. ಖಾಸಗಿ ವಾಹನದಲ್ಲಿಯೂ ಬಂದು ಇಲ್ಲಿ ಕಸ ಹಾಕುತ್ತಾರೆ. ಆದರೂ ನಗರಸಭೆ ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಲಾರಿ ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು. ಅಧಿಕಾರಿಗಳು ಸ್ಥಳಕ್ಕೆ ಬರದಿದ್ದರೆ ಸಂಸ್ಕರಣಾ ಘಟಕಕ್ಕೆ ಹೋಗುವ ವಾಹನಗಳನ್ನೂ ತಡೆಯುತ್ತೇವೆ ಎಂದು ಹೇಳಿದರು. ಜನರ ಈ ಎಚ್ಚರಿಕೆ ಪರಿಣಾಮಕಾರಿಯಾದ ಹಿನ್ನಲೆಯಲ್ಲಿ ಪೌರಾಯುಕ್ತೆ ಸ್ಥಳಕ್ಕೆ ಭೇಟಿನೀಡಿದರು. ಪ್ರತಿಭಟನೆ ತಾತ್ಕಾಲಿಕವಾಗಿ ವಾಪಾಸು ಪಡೆದುಕೊಳ್ಳಲಾಯಿತು.

























