ರಸ್ತೆ ದುರಸ್ಥಿಗೆ ಅನುದಾನ ಬಿಡುಗಡೆ

ಬೆಂಗಳೂರು, ಆ. ೧೩- ರಾಜ್ಯದಲ್ಲಿ ಗ್ರಾಮೀಣ ರಸ್ತೆಗಳು ಹದಗೆಟ್ಟಿರುವುದು ಸರ್ಕಾರದ ಗಮನದಲ್ಲಿದೆ. ಹದಗೆಟ್ಟಿರುವ ರಸ್ತೆಗಳ ದುರಸ್ಥಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಜಗದೀಶ್ ಶಿವಯ್ಯ ಗುಂಡಗುಂಟಿ ರವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಗ್ರಾಮೀಣ ರಸ್ತೆಗಳು ಹಾಳಾಗಿದ್ದ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ನಿಯಮಗಳ ಪ್ರಕಾರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಪ್ರಗತಿ ಪಥ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ೧೫ ರಿಂದ ೧೮ ಕಿ.ಮೀ. ಗ್ರಾಮೀಣ ರಸ್ತೆಗಳ ದುರಸ್ಥಿ ಕೈಗೊಳ್ಳಲು ನಿಯಮಗಳನ್ನು ಸರಳೀಕರಣ ಮಾಡಿದ್ದೇವೆ. ನಮ್ಮ ರಸ್ತೆ ನಮ್ಮ ಹೊಲ ಯೋಜನೆ ಕಳೆದ ೬ ವರ್ಷಗಳಿಂದ ಸ್ಥಗಿತವಾಗಿತ್ತು. ಇದಕ್ಕೂ ಮುಖ್ಯಮಂತ್ರಿಗಳು ೩ ಕೋಟಿ ಅನುದಾನ ನೀಡಲು ಮುಂದಾಗಿದ್ದಾರೆ. ಗ್ರಾಮೀಣ ರಸ್ತೆಗಳ ದುರಸ್ಥಿಗೆ ಸರ್ಕಾರ ಅನುದಾನ ನೀಡುತ್ತಿದೆ ಎಂದು ಹೇಳಿದರು.


ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಜಗದೀಶ್ ಗುಡಗುಂಟಿಯವರು ಜಮಖಂಡಿ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗರ್ಭಿಣಿಯರನ್ನು ವಾಹನದಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ. ಜೋಳಿಗೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಇದೆ. ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ. ಅನುದಾನ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.