
ಸುರತ್ಕಲ್: ಹಲವು ವರ್ಷಗಳಿಂದ ದುರಸ್ತಿಯಾದೇ ಸಂಪೂರ್ಣ ನಾಶವಾಗಿರುವ ಕಾನ- ತೋಕೂರು- ಜೋಕಟ್ಟೆ ಮುಖ್ಯ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ, ಆಟೊರಿಕ್ಷಾ ಚಾಲಕರ ಸಂಘ ಸಿಐಟಿಯು, ಡಿಬೈಎಫ್‌ಐ ಸಂಘಟನೆಗಳು ಮಂಗಳವಾರ ಕಾನ ಜಂಕ್ಷನ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರು, ಸುರತ್ಕಲ್ ಭಾಗದ ಎಲ್ಲಾ ರಸ್ತೆಗಳು ನಾಗರೀಕರ ಹೋರಾಟಗಳ ಹೊರತು ದುರಸ್ಥಿಯಾಗಿರುವ ಇತಿಹಾಸವೇ ಇಲ್ಲ. ಕಾನ- ತೋಕೂರು- ಜೋಕಟ್ಟೆ ದುರಸ್ತಿಗೆ ನಾಗರೀಕರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬರುತ್ತಿದ್ದರೂ ಯಾವುದೇ ಅಧಿಕಾರಿ, ಎಂಆರ್ ಪಿಎಲ್, ಎಂಎಸ್ ಇ ಝೆಡ್ ನಂತ ಕಂಪೆನಿಗಳು ಸ್ಪಂದಿಸುತ್ತಿಲ್ಲ. ಮನಪಾ, ಎಂಆರ್ಪಿಎಲ್, ಎಂಎಸ್ ಇಝೆಡ್, ಸೇರಿದಂತೆ ಜನಪ್ರತಿನಿಧಿಗಳು ಈ ರಸ್ತೆನಮ್ಮದಲ್ಲ ಎಂದು ಸಬೂಬು ಹೇಲುತ್ತಾ ಕಾಲಹರಣ ಮಾಡುತ್ತಿದ್ದು, ಈರಸ್ತೆಗೆ ತಂದೆ ತಾಯಿ ಇಲ್ಲದಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಕಂಪೆನಿಗಳು ಸುಳ್ಳುಹೇಳುತ್ತಾ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ರಸ್ತೆಯಲ್ಲಿ ನಡೆಯುತ್ತಿರುವ ಅಪಘಾತಗಳು ಮತ್ತು ಗಾಯಾಳುಗಳ ಲೆಕ್ಕವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ಅಪಘಾತಗಳಿಗೆ ರಸ್ತೆಯನ್ನು ದುರಸ್ತಿಮಾಡದವರನ್ನೂ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೂ ಪ್ರಕರಣಗಳನ್ನು ದಾಖಲಿಸಿಬೇಕು ಎಂದು ಆಗ್ರಹಿಸಿದ ಅವರು, ೧೫ದಿನಗಳ ಒಳಗಾಗಿ ರಸ್ತೆ ದುರಸ್ತಿ ಮಾಡದಿದ್ದರೆ, ಈ ರಸ್ತೆಯನ್ನು ಒಂದು ದಿನ ಸಂಪೂರ್ಣ ಮುಚ್ಚಿ ಪ್ರತಿಭಟಿಸಲಾಗುವುದು. ಅದಕ್ಕೂ ಬಗ್ಗದಿದ್ದಲ್ಲಿ ನೇರ ಎಂಆರ್ ಪಿಎಲ್, ಎಂಎಸ್ ಇ ಝೆಡ್ ಎದುರು ನಾಗರೀಕರೊಂದಿಗೆ ಬೃಹತ್ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆಗಳ ಅವ್ಯವಸ್ಥೆಯಿಂದ ಅತೀ ಹೆಚ್ಚಿನ ಅಪಘಾತಗಳು ನಡೆದು ಅನೇಕರು ಗಾಯಗೊಳ್ಳುತ್ತಿದ್ದರೆ, ಹಲವರು ಮೃತಪಡುತ್ತಿ ದ್ದಾರೆ ಮಂಗಳೂರು ಉತ್ತರ ಕ್ಷೇತ್ರ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಇಲ್ಲಿನ ಜನಪ್ರತಿನಿಧಿಗಳು, ಆಳುವ ಸರಕಾರಗಳು ಜನರ ಪರವಾಗಿಲ್ಲ. ಹೀಗಾಗಿ ಇಲ್ಲಿ ಜನರ ಪ್ರಾಣ ಬದುಕಿಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿನ ಶಾಸಕರು ವಿಧಾನ ಸೌಧದಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗೆಯಾಗಲೀ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತೆತ್ತುತ್ತಿ. ಕ್ಷೇತ್ರದಲ್ಲಿ ಅವರ ಸಾಧನೆ ಶೂನ್ಯ ಎಂದು ಶಾಸಕ ಭರತ್ ಶೆಟ್ಟಿಯವರನ್ನು ಪರೋಕ್ಷವಾಗಿ ಟೀಕಿಸಿದರು.
ಪ್ರತಿಭಟನೆಯಲ್ಲಿ ಸುರತ್ಕಲ್ ಸೆಕ್ರೆಡ್ ಹಾರ್ಟ್ ಚರ್ಚ್ ಉಪಾಧ್ಯಕ್ಷ ಲಿಗೋರಿ ಜಾರ್ಜ್, ಡಿವೈಎಫ್‌ಐ ನಗರ ಕಾರ್ಯದರ್ಶಿ ತಯ್ಯಿಬ್ ಬೆಂಗ್ರೆ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಬಷೀರ್ ಮೊದಲಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಬಿ.ಕೆ ಮಸೂದ್, ಅಝ್ಮಲ್ ಅಹ್ಮದ್, ಶ್ರೀನಾಥ್ ಕುಲಾಲ್, ಜಗದೀಶ್, ಅಬ್ದುಲ್ ರಹೀಮ್, ಅಬೂಬಕ್ಕರ್ ಕೆ.ಪಿ., ಫ್ರಾನ್ಸಿಸ್ ಡಿಸೋಜಾ, ಮುಸ್ತಫಾ ಒಟ್ಟೆಕಾಯರ್, ಲಕ್ಸ್ಮಿಶ ಅಂಚನ್, ಹಂಝ ಮೈಂದಗುರಿ, ಸುಧೀರ್ ಕೋಡಿಕೆರೆ, ಐ.ಮೊಹಮ್ಮದ್, ಇಬ್ರಾಹಿಂ ಹಳೆಮನೆ, ಹನೀಫ್ ಕುಳಾಯಿ, ನವಾಝ್ ಕುಳಾಯಿ, ಸಿರಾಜ್ ಮೈಂದಗುರಿ, ರಾಜಾ ಕಾನ, ಶೀಲಾ ಡಿಸೋಜಾ, ಫಾತಿಮಾ ಮೊದಲಾದವರು ಉಪಸ್ಥಿತರಿದ್ದರು.




























