ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಗುದ್ದಲಿ ಪೂಜೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.23:
ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣ-ಮೈಸೂರು ಮುಖ್ಯ ರಸ್ತೆಯಿಂದ ಮಾದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7-8 ಕಿ,ಮೀ ಉದ್ದದ ಉತ್ತಮ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.


ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿಮೀ ಉದ್ದದ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಮಾದಾಪುರ ಚಿನ್ನೇನಹಳ್ಳಿ, ಗೊಂದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನತೆ ನನಗೆ ಹಲವು ಬಾರಿ ಚನ್ನರಾಯಪಟ್ಟಣ-ಮೈಸೂರು ಮುಖ್ಯರಸ್ತೆಯಿಂದ ಮಾದಾಪುರ ಗ್ರಾಮದವರೆಗೆ ಸಂಪೂರ್ಣ ಹಾಳಾಗಿದ್ದು ಹೊಸ ರಸ್ತೆ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ ವಿವಿಧ ಯೋಜನೆಗಳ ಅಡಿಯಲ್ಲಿ ಏಳು ಕಿಮೀ ರಸ್ತೆಯನ್ನು ಅಭಿವೃದ್ದಿಪಡಿಸಲು ಈಗಾಗಲೇ ಕ್ರಿಯಾಯೋಜನೆ ಸಿದ್ದಪಡಿಸಿದ್ದು ಮುಂದಿನ ಒಂದು ವರ್ಷದಲ್ಲಿ ಸಂಪೂರ್ಣವಾಗಿ ಹೊಸ ರಸ್ತೆ ನಿರ್ಮಿಸಿಕೊಡಲಾಗುತ್ತದೆ. ಲಭ್ಯವಿರುವ ಅನುದಾನವನ್ನು ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಹಂಚಿಕೆ ಮಾಡುತ್ತಿದ್ದು ಸರ್ಕಾರದ ಅನುದಾನ ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.


20-25 ದಿನ ಕ್ಷೇತ್ರದಾದ್ಯಂತ ಪ್ರವಾಸ:-
ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಅರಿವು ನನ್ನ ತಾಲ್ಲೂಕಿನ ಮತದಾರರಿಗೆ ಇದೆ. ಒಬ್ಬ ಶಾಸಕನ ಪರಿಸ್ಥಿತಿಯನ್ನು ಸರ್ಕಾರ ಹೇಗೆ ಶಾಸಕರಿಗೆ ಸ್ಪಂದನೆ ಮಾಡುತ್ತಿದೆ ಎಂಬುದನ್ನು ಪ್ರತಿದಿನ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪರಿಸ್ಥಿತಿ ನೋಡಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕರಾಗಿರುವ ನನ್ನ ಕೆಲಸದ ಬಗ್ಗೆ ಕಾರ್ಯಕರ್ತರಿಗೆ ತೃಪ್ತಿ ಇದೆ. ಇಂಥಹ ಸಮಯದಲ್ಲಿಯೂ ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಜನರ ಕಷ್ಟಸುಖಗಳಿಗೆ ನನ್ನ ಕೈಲಾದಷ್ಟು ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ. ತಿಂಗಳಲ್ಲಿ 25 ದಿನ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದೇನೆ ಎಂದರು.


ಇದೇ ಸಂದರ್ಭದಲ್ಲಿ ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ. ತಾಪಂ ಮಾಜಿ ಸದಸ್ಯ ಐಕನಹಳ್ಳಿಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿಮಲ್ಲೇಶ್, ವಿಎಸ್‍ಎಸ್‍ಎನ್ ಮಾಜಿ ಅಧ್ಯಕ್ಷ ಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ಶೇಖರ್, ಗ್ರಾಮದ ಮುಖಂಡರಾದ ದೇವೇಗೌಡ, ಧರ್ಮರಾಜು, ಅಶೋಕ್, ಯೋಗಣ್ಣ, ಅಣ್ಣೇಗೌಡ, ಸಂದೀಪ್, ಕಾಂತರಾಜು, ಎಇಇ ಬೋರಯ್ಯ, ಎಇ ಬಸವೇಗೌಡ, ಜೆಇ ಕೃಷ್ಣಮೂರ್ತಿ, ಗುತ್ತಿಗೆದಾರ ಆರ್.ಪಿ.ರೇವಣ್ಣ ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರಿದ್ದರು.