
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.18: ರೈತರಿಗೆ ಸುಮಾರು 2ಸಾವಿರ ರೂ.ಗಳಷ್ಟು ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ಯೂರಿಯಾ ರಸಗೊಬ್ಬರವು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಯಲು ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಹಕಾರ ಅಗತ್ಯವಾಗಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸಿ ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಆಶೋಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ತಾಲ್ಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಂಘದ ಸದಸ್ಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿ, ರೈತರ ಮಿತ್ರನಂತೆ ಕೆಲಸ ಮಾಡಬೇಕು. ರೈತರಿಗೆ ನಮ್ಮ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಸಹಕಾರ ನೀಡಬೇಕು.ಸರ್ಕಾರವು ನೀಡುವ ಸಬ್ಸಿಡಿ ದರದ ಉಪಕರಣಗಳನ್ನು ಮಾರಾಟ ಮಾಡಬೇಕು ಎಂದು ತಿಳಿಸಿದರು.
ಪಾಂಡವಪುರದ ಕೃಷಿಉಪನಿರ್ದೆಶಕ ಭಾನುಪ್ರಕಾಶ್ ಮಾತನಾಡಿ, ಹವಾಮಾನಕ್ಕೆ ತಕ್ಕಂತೆ ಮಣ್ಣಿನ ರಸಸಾರ ಹಾಗೂ ಫಲವತ್ತತೆಗೆ ಹೊಂದಿಕೆಯಾಗುವಂತಹ ಗುಣ ಮಟ್ಟದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಿ, ಬೇಸಾಯ ಮಾಡಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚು ಲಾಭ ಸಿಗುತ್ತದೆ ಎಂದು ಕಳಪೆ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ಮಾರಾಟ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಶ್ರೀಧರ್, ರಸಗೊಬ್ಬರ ಮಾರಾಟಗಾರರ ಪ್ರತಿನಿಧಿಗಳು, ರಸಗೊಬ್ಬರ ಅಂಗಡಿಗಳ ಮಾಲೀಕರು ಭಾಗವಹಿಸಿದ್ದರು.