ಸಂಜೆವಾಣಿ ನ್ಯೂಸ್
ಮೈಸೂರು: ನ.03:- ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಪೂರಕವಾಗಿ ಆಗಬೇಕಾಗಿರುವ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರನ್ ವೇ ವಿಸ್ತರಣೆಗಾಗಿ 280 ಎಕರೆ ಭೂಮಿ ಅಗತ್ಯವಾಗಿತ್ತು. ಇದರಲ್ಲಿ 240 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸಂಬಂಧಪಟ್ಟ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲಾಗಿದೆ. ಉಳಿದ 40 ಎಕರೆ ಜಮೀನು ಸ್ವಾಧೀನಕ್ಕೆ ರೈತರೊಂದಿಗೆ ಮಾತುಕತೆಯಾಡಲಾಗಿದೆ. ಅವರು ಕೂಡ ಜಮೀನು ನೀಡಲು ಒಪ್ಪಿಕೊಂಡಿದ್ದಾರೆ. ಆದರೆ, ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಜಮೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅದರಂತೆ ಇನ್ನೊಂದು ವಾರದಲ್ಲಿ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
ರನ್ ವೇ ವಿಸ್ತರಣೆ ಮಾಡುವ ಪ್ರದೇಶದಲ್ಲಿ ಹೈ ಪವರ್ ವಿದ್ಯುತ್ ಲೈನ್ ಹಾದು ಹೋಗಿದೆ. 3 ನೀರು ಕಾಲುವೆಗಳು ಇವೆ. ಹೀಗಾಗಿ ಇವುಗಳನ್ನು ಸ್ಥಳಾಂತರ ಮಾಡುವ ಹಾಗೂ ವಿನ್ಯಾಸವನ್ನು ಬದಲಾವಣೆ ಮಾಡುವ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಹಾಗೂ ಕೆಪಿಟಿಸಿಎಲ್‍ಗೆ ಅಗತ್ಯ ಹಣವನ್ನು ರಾಜ್ಯ ಸರ್ಕಾರ ನೀಡಿದೆ. ಕೆಲವೇ ದಿನಗಳಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದರು.
ಸುರಂಗ ಮಾರ್ಗ ಪ್ರಸ್ತಾವನೆ: ರನ್ ವೇ ವಿಸ್ತರಣೆಯಾಗಲು ಮೈಸೂರು-ನಂಜನಗೂಡು ಹೆದ್ದಾರಿಯ ಮಾರ್ಗವನ್ನು ಬದಲಾಯಿಸಬೇಕಾಗುತ್ತದೆ. ಇದು ಸುಮಾರು 7 ಕಿಲೋಮೀಟರ್ ಬಳಸಿಕೊಂಡು ಮತ್ತೆ ಹೆದ್ದಾರಿಗೆ ಸೇರಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ವಿಮಾನ ನಿಲ್ದಾಣದ ಜಾಗದಲ್ಲಿ 3 ಕಿಲೋ ಮೀಟರ್ ಸುರಂಗವನ್ನು ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ಹಿಂದೆ ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಕೆಳಗೆ ಸುರಂಗ ನಿರ್ಮಾಣ ಮಾಡಲು ಅನುಮತಿ ದೊರೆಯುತ್ತಿರಲಿಲ್ಲ. ಈಗ ಸಕ್ಷಮ ಪ್ರಾಧಿಕಾರದವರೂ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಜತೆ ಮಾತನಾಡಿ ಅಂತಿಮಗೊಳಿಸಲಿದ್ದಾರೆ ಎಂದರು.
ಒಂದು ವೇಳೆ ಸುರಂಗ ನಿರ್ಮಾಣ ಮಾಡಿದರೆ ಅಲ್ಲಿ ಹಾದು ಹೋಗಿರುವ ನೀರಾವರಿ ಕಾಲುವೆಗಳಿಗೆ ಯಾವುದೇ ರೀತಿ ಅಡ್ಡಿಯಾಗಬಾರದಂತೆ ಎಚ್ಚರಿಕೆ ವಹಿಸಿ ಯೋಜನಾ ವಿನ್ಯಾಸ ಸಿದ್ಧಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯಾದರೆ ಕಾರ್ಗೋ ಸೇವೆ ನೀಡಬಹುದು. ಏವಿಯೇಷನ್ ತರಬೇತಿಗೂ ಅನುಕೂಲವಾಗುತ್ತದೆ. ಐಟಿ, ಬಿಟಿ ಕಂಪನಿಗಳಿಗೆ ಉದ್ಯಮ ಸ್ಥಾಪನೆಗೆ ಬಹಳ ಅನುಕೂಲವಾಗಲಿದೆ ಎಂದರು.
400 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್: ಲೋಕೋಪಯೋಗಿ ಇಲಾಖೆ ವತಿಯಿಂದ 400 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಮೈಸೂರು ನಗರದ 12 ರಸ್ತೆಗಳ 46 ಕಿಲೋಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಈ ವಿಚಾರವಾಗಿ ಸ್ಥಳೀಯ ಶಾಸಕರ ಜತೆಯೂ ಚರ್ಚೆ ನಡೆಸಲಾಗಿದ್ದು, ಅವರು ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಸಲಹೆ ನೀಡಿದ್ದಾರೆ. ಅವುಗಳನ್ನು ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಂಡು ಕೆಲಸ ಆರಂಭವಿಸುವಂತೆ ಸೂಚಿಸಲಾಗಿದೆ ಎಂದರು.
ಮೈಸೂರು ನಗರಕ್ಕೆ ಮೆಟ್ರೋ ಯೋಜನೆ, ಕೆಲವು ಕಡೆ ಫೈ ಓವರ್ ನಿರ್ಮಾಣ, ಸಬ್ ವೇ ಸ್ಥಾಪನೆ ಕುರಿತಂತೆ ಹಲವು ಸಲಹೆಗಳು ಬಂದಿವೆ. ಇವುಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದರು.


























