
ಸುಳ್ಯ:ರಥಸಪ್ತಮಿಯ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದ ಆವರಣದಲ್ಲಿ ತುಮಕೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುಳ್ಯ ಶಾಖೆಗಳ ವತಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯದ ಉದ್ಯಮಿ ಹಾಗೂ ಯೋಗಬಂಧು ಹೇಮಂತ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ರಥಸಪ್ತಮಿಯ ವಿಶೇಷ ಬೌದ್ಧಿಕ್‌ನ್ನು ಕುಸುಮಾವತಿ ನಡೆಸಿಕೊಟ್ಟರು. ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಸುಧಾ ಅಮೃತವಚನ ಮತ್ತು ಯಶ್ವಿನಿ ಪಂಚಾಂಗ ಪಠಣ ಮಾಡಲಾಯಿತು. ನಂತರ ಎಲ್ಲಾ ಯೋಗ ಬಂಧುಗಳು ೧೦೮ ಸೂರ್ಯ ನಮಸ್ಕಾರಗಳನ್ನು ಮಾಡಿದರು. ರಾಜೇಶ್, ಜಲಜಾಕ್ಷಿ, ನಿಶಿತಾ, ವಸಂತ, ಲತಾ, ಸಂತೋಷ್, ಗೋಪಾಲಕೃಷ್ಣ , ವಮಿಕಾ, ಜಲಜಾಕ್ಷಿ ಶೆಟ್ಟಿ , ಅರ್ಚನಾ, ಕುಶಾಲಪ್ಪ ಮೊದಲಾದವರು ಸೂರ್ಯ ನಮಸ್ಕಾರದ ವಿವರಣೆ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಚಾಲಕ ಸೂರ್ಯನಾರಾಯಣ ಪ್ರಭು ವಂದಿಸಿದರು. ವಿಂಧ್ಯಾಶ್ರೀ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕು ಸಂಚಾಲಕರಾದ ಸುನಂದಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಮಿತಿಯ ನಿರ್ದೇಶನದಂತೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.




























