
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.25: ರಂಗಭೂಮಿಗೆ ಬಳ್ಳಾರಿ ರಾಘವರ ಕೊಡುಗೆ ಅಪಾರ ಎಂದು ರಾಘವ ಮೆಮೊರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪನವರು ತಿಳಿಸಿದರು.
ಬಳ್ಳಾರಿ ಜಿಲ್ಲಾ ಕ.ಸಾ.ಪ ಮತ್ತು ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನಾಟ್ಯ ಕಲಾಪ್ರಪೂರ್ಣ ಬಳ್ಳಾರಿ ಟಿ. ರಾಘವಾಚಾರ್ಯ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಘವರು ರಂಗ ಕಲಾವಿದರಾಗಿ ದೇಶವಿದೇಶಗಳಲ್ಲಿ ನಾಟಕ ಪ್ರದರ್ಶನ ನೀಡುವ ಮೂಲಕ ಬಳ್ಳಾರಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದರೆಂದು ಕೆ. ಚೆನ್ನಪ್ಪ ತಿಳಿಸಿದರು.
ಬಳ್ಳಾರಿ ರಾಘವರ ಜೀವನ ಮತ್ತು ಸಾಧನೆ ಕುರಿತು ವಿಶ್ರಾಂತ ಉಪನ್ಯಾಸಕ ಎನ್. ಬಸವರಾಜ ಉಪನ್ಯಾಸ ನೀಡಿದರು.
ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷರಾದ ಪಿ. ರಾಮಬ್ರಹ್ಮಂ ಕಾನೂನು ವಿದ್ಯಾರ್ಥಿಗಳಿಗೆ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ವಿಧೇಯಕ ಮತ್ತು ಸಿವಿಲ್ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ. ನರೇಂದ್ರಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕಾರ್ಯಕ್ರಮಗಳ ಜೊತೆಗೆ ವೃತ್ತಿಯಾಧಾರಿತ ಶಿಕ್ಷಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ದತ್ತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸುತ್ತಿರುವದು ಅರ್ಥಪೂರ್ಣವೆಂದರು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಣ್ಣಾಜಿ ಕೃಷ್ಣಾರೆಡ್ಡಿ ರಚಿಸಿದ ‘ಜಂಗಮಕ್ಕಳಿವಿಲ್ಲ ಮತ್ತು ಒಂದು ಸಾವಿನ ಸುತ್ತ’ ಕೃತಿಯನ್ನು’ ರಾಘವ ಕಲಾ ಮಂದಿರದ ಉಪಾಧ್ಯಕ್ಷ ಬಾಣಾಪುರ ರಮೇಶಗೌಡ ಮಾಡಿದರು. ಕೃತಿ ಕುರಿತು ಸತ್ಯಂ ಬಿ.ಇಡಿ., ಕಾಲೇಜಿನ ಅಧ್ಯಾಪಕ ಅಲಂಬಾಷಾ ಕೃತಿ ಪರಿಚಯ ಮಾಡಿದರು.
ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ಎನ್. ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಭಾರತಿ ಸ್ವಾಗತಿಸಿದರು. ಅಣ್ಣಾಜಿ ಕೃಷ್ಣಾರೆಡ್ಡಿ ಪ್ರಾರ್ಥನೆ ಸಲ್ಲಿಸಿದರು. ಕಸಾಪ ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ ಚಂದ್ರಶೇಖರಚಾರ್ ಕಾರ್ಯಕ್ರಮ ನಿರೂಪಿಸಿದರು. ಕು. ನಂದಿತಾ ವಂದನಾರ್ಪಣೆ ಸಲ್ಲಿಸಿದರು.























