
ಸಂಜೆವಾಣಿ ನ್ಯೂಸ್
ಮೈಸೂರು: ಜ.08:- ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ ಆಗಿವೆ ಎಂಬುದರ ಚರ್ಚೆ ಆಗಬೇಕಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ತಮ್ಮ ಅವಧಿಯಲ್ಲಿ ಒಂದು ಕ್ರಾಂತಿ ತಂದಿದ್ದರು. ಗ್ರಾಮಾಂತರ ಮಟ್ಟದಲ್ಲಿ ಇಂದಿಗೂ ಅವರನ್ನು ಹೆಚ್ಚು ನೆನೆಯುತ್ತಾರೆ. ಆದರೆ, ಸಿಎಂ ತವರಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಏನು? ಸಿದ್ದರಾಮಯ್ಯ ಅವರು ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ. ತವರಿಗಾಗಿ ಅವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಟೀಕಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ತಕರಾರಿಲ್ಲ. ಆದರೆ, ಗ್ಯಾರಂಟಿ ಯೋಜನೆ ಸರಿಯಾಗಿ ನಡೆಯುತ್ತಿಲ್ಲ. ಎರಡು ಸಾವಿರ ಹಣ ನಿಜಕ್ಕೂ ಬರುತ್ತಿದೆಯೇ? ಯುವನಿಧಿ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಕರೆಂಟ್ ಬಿಲ್ ಹಣವನ್ನು ಎಲ್ಲೋ ಕಿತ್ತು ಎಲ್ಲೋ ಕೊಡುತ್ತಿದ್ದಾರೆ. ಫ್ರೀ ಬಸ್ ಯೋಜನೆಯಿಂದಾಗಿ ಕೆಎಸ್‍ಆರ್‍ಟಿಸಿ ಆರ್ಥಿಕ ನಷ್ಟದಲ್ಲಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಹೇಳಿದರು
ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳಬೇಕು. ನಮಗೆ ಸಿಎಂ ಬದಲಾವಣೆ ಬಗ್ಗೆ ಚಿಂತೆ ಇಲ್ಲ. ಜನರಿಗೆ ಒಳ್ಳೆಯ ಕಾನೂನು ಸುವ್ಯವಸ್ಥೆ ಕೊಡುವ ಮುಖ್ಯಮಂತ್ರಿ ಬೇಕಾಗಿದೆ. ಆದರೆ, ಸಿಎಂ ಬದಲಾವಣೆಯಿಂದ ಇದು ಸಾಧ್ಯವಿದೆ ಎಂದು ನಮಗೆ ಅನಿಸುತ್ತಿಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೆÇಲೀಸರು ಹಲ್ಲೆ ನಡೆÀಸಿರುವ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಗೌರವ ನೀಡುವುದು ಅವಶ್ಯಕವಾಗಿದ್ದು, ಈ ಪ್ರಕರಣ ಖಂಡನೀಯವಾಗಿದೆ. ಆಡಳಿತಾಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ಆಗಿದ್ದು, ರಾಜ್ಯದಲ್ಲಿ ಸರಿಯಾದ ಕಾನೂನು ಸುವ್ಯವಸ್ಥೆ ಇಲ್ಲ. ಕಾಂಗ್ರೆಸ್ ಹೇಳಿಕೆ, ನಡವಳಿಕೆಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಹವಾಲು ಸ್ವೀಕಾರ: ಯದುವೀರ್ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಿದರು.
ಉದ್ದೇಶಪೂರ್ವಕವಾಗಿ ಪ್ರಚೋದನೆ: ಬಳ್ಳಾರಿಯಲ್ಲಿ ಪಾಲಿಟಿಕ್ಸ್ ನಡೆಯುತ್ತಿದ್ದು, ನಮ್ಮ ಮನೆಯ ಮುಂದೆ ನಿಮ್ಮ ಫ್ಲೆಕ್ಸ್, ಬಾವುಟ ಹಾಕುವುದು ಎಷ್ಟು ಸರಿ? ಇದು ಸಹಜವಾಗಿ ನಡೆದ ಗಲಾಟೆಗೆ ಆಗಿದ್ದರೂ, ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದ್ದಾರೆ. ಗಲಾಟೆ ಮಾಡುವ ಉದ್ದೇಶದಿಂದ ಇಂತಹ ಕೃತ್ಯ ಮಾಡಿದ್ದಾರೆ. ಮೊದಲು ಟಿಪ್ಪು ಹೆಸರಿನಲ್ಲಿ ಗಲಾಟೆ ಮಾಡಿಸುತ್ತಿದ್ದರು. ಈಗ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಅವುಗಳನ್ನು ಮುಚ್ಚಿಹಾಕಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯದುವೀರ್ ಒಡೆಯರ್ ದೂರಿದರು.


























