ಯುವತಿಯನ್ನು ವಂಚಿಸಿದ ಪ್ರಕರಣ: ನಿರೀಕ್ಷಣಾ ಅರ್ಜಿ ಜು.೧೦ಕ್ಕೆ ಮುಂದೂಡಿಕೆ

ಪುತ್ತೂರು; ಪುತ್ತೂರಿನ ನಗರಸಭಾ ಸದಸ್ಯನ ಪುತ್ರ ಯುವತಿಯನ್ನು ಗರ್ಭಿಣಿಯಾಗಿ ವಂಚಿಸಿದ ಪ್ರಕರಣದಲ್ಲಿನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗುರುವಾರ ನಡೆದು ಜುಲೈ ೧೦ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಪ್ರಕರಣದ ವಿಚಾರಣೆ ವೇಳೆ, ಸಂತ್ರಸ್ತೆ ಪರವಾಗಿ ಆಕೆಯ ತಾಯಿ ನಮಿತಾ ನ್ಯಾಯಾಧೀಶರ ಮುಂದೆ ಹಾಜರಾದರು. ಸಂತ್ರಸ್ತೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಆಕೆ ಮೂರು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು. ಜತೆಗೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ ಎಂದು ಮೌಖಿಕ ವಿರೋಧ ಸ್ಪಷ್ಟಪಡಿಸಿದರು. ನನ್ನ ಮಗಳು ಮೂರು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯಲ್ಲಿದ್ದಾಳೆ. ಆರೋಪಿಗೆ ಜಾಮೀನು ನೀಡಬಾರದು ಎಂದು ಅವರು ಮನವಿ ಮಾಡಿದರು.
ಸಂತ್ರಸ್ತೆಯ ತಾಯಿಯ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರು ಈ ಕುರಿತು ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜು.೧೦ಕ್ಕೆ ಮುಂದೂಡಿದೆ.
ನಾಪತ್ತೆಗೆ ೧೦ ದಿನಗಳು
ಮಹಿಳಾ ಠಾಣೆಯಲ್ಲಿ ಜೂ.೨೪ರಂದು ಪ್ರಕರಣ ದಾಖಲಾಗಿದ್ದು, ಅಂದಿನಿಂದ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ. ರಾವ್ ತಲೆ ತಪ್ಪಿಸಿಕೊಂಡಿದ್ದಾನೆ. ವಿವಿಧ ತಂಡಗಳನ್ನು ಮಾಡಿಕೊಂಡು ಪೊಲೀಸರು ೧೦ ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಅತ್ತ ಪುತ್ರ ಪರಾರಿಯಾಗಿದ್ದರೆ, ಇತ್ತ ಯುವಕನ ಅಪ್ಪ ನಗರಸಭಾ ಸದಸ್ಯ ಪಿ. ಜಿ. ಜಗನ್ನಿವಾಸ ರಾವ್ ಆಸ್ಪತ್ರೆ ಸೇರಿದ್ದು, ಪೊಲೀಸರು ಅವರ ಮೇಲೆಯೂ ನಿಗಾ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.