
ಸಂಜೆವಾಣಿ ವಾರ್ತೆ
ಹಂಪಿ(ವಿರೂಪಾಕ್ಷೇಶ್ವರ ವೇದಿಕೆ):ಫೆ.16: ನವಕಾಲದ ಯುವ ಕವಿಗಳು ಜನಸಾಮಾನ್ಯರ ಬದುಕು ಬವಣೆಗಳಿಗೆ ಧ್ವನಿಯಾಗಬೇಕು. ಸಾಹಿತ್ಯ ಪರಂಪರೆಯಲ್ಲಿ ದಾಖಲಾಗದ ಬೀದಿಯಲ್ಲಿರುವ ಕೂಲಿ ಕಾರ್ಮಿಕರ ಜೀವನವನ್ನು ಕವಿತೆಗಳಲ್ಲಿ ಅಭಿವ್ಯಕ್ತಪಡಿಸಬೇಕು ಎಂದು ಹಿರಿಯ ಸಾಹಿತಿ ಎ.ಎಂ.ಮದರಿ ಯುವಕವಿಗಳಿಗೆ ಸಲಹೆ ನೀಡಿದರು.
ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ನಡೆದ ಯುವಕವಿಗೋಷ್ಠಿ ಉದ್ಘಾಟಿಸಿ ಎ.ಎಂ.ಮದರಿ ಮಾತನಾಡಿದ ಅವರು ಕವಿತೆ ಹಾಗೂ ಕಾವ್ಯರಚನೆಗೆ ಅರ್ಥಗರ್ಭಿತವಾದ ಭಾಷೆ, ಶೈಲಿ, ಆಕೃತಿ ಬಳಹ ಮುಖ್ಯವಾದವು. ಯುವಕವಿಗಳು ಇವನ್ನು ನಿರ್ಲಕ್ಷಿಸಬಾರದು. ಹಳೆಗನ್ನಡ, ವಚನ, ತತ್ವಪದ, ಜಾನಪದ, ದಾಸವಾಣಿ ಹಾಗೂ ನವೋದಯ ಸಾಹಿತ್ಯ ಯುವ ಕವಿಗಳಿಗೆ ಕವಿತೆ ರಚಿಸಲು ದಿಕ್ಕ್ಸೂಚಿಯಾಗಬೇಕು ಕವಿತೆ ಎಂಬುದು ಮನಸ್ಸಿನ ಭಾರ ಇಳಿಸಿಕೊಳ್ಳುವ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವ ಮಾರ್ಗವೂ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಇತಿಹಾಸ, ಪರಂಪರೆ ಹಾಗೂ ವರ್ತಮಾನಕ್ಕೆ ಸಂವಾದಿಯಾದ ಯುವ ಕವಿಗೋಷ್ಠಿ :
ಯುವಕವಿಗೋಷ್ಠಿಯಲ್ಲಿ 38 ಯುವ ಸಾಹಿತಿಗಳು ಸ್ವರಚಿತ ಕವನ ಹಾಗೂ ಕವಿತೆಗಳನ್ನು ವಾಚಿಸಿದರು. ಇತಿಹಾಸ, ಪರಂಪರೆ ಹಾಗೂ ವರ್ತಮಾನಕ್ಕೆ ಸಂವಾದಿಯಾದ ಕವನ ಹಾಗೂ ಕವಿತೆಗಳು ಸಹೃದಯರ ಮೆಚ್ಚುಗೆ ಗಳಿಸಿದವು. ವಿಜಯನಗರ ಸಾಮ್ರಾಜ್ಯದ ಐತಿಹ್ಯ, ಪೌರಾಣಿಕ ಚಿತ್ರಣ, ಪ್ರಸ್ತಕ ರಾಜಕೀಯ, ಧರ್ಮ ಸಂಘರ್ಷ, ತಂದೆಯ ಪ್ರೀತಿ, ಹೆಣ್ಣು ಮಗು ಹಾಗೂ ಸ್ರ್ತೀ ಸಂವದೇನೆಗಳುಳ್ಳ ಕವಿತೆಗಳನ್ನು ರಚಿಸುವ ಮೂಲಕ ಯುವ ಕವಿಗಳು ಒಟ್ಟಾರೆ ಸಮಕಾಲೀನ ಸಮಾಜದಲ್ಲಿನ ಅಂಶಗಳಿಗೆ ಕೈಗನ್ನಡಿಯಾದರು.
ಮುಗಿಲ ಹಕ್ಕಿ ಎಂಬ ಕಾವ್ಯ ನಾಮದೊಂದಿಗೆ ಯುವ ಕವಿ ಮೈಲಾರಪ್ಪ ಬೂದಿಹಾಳ ತಮ್ಮ ‘ಬಟ್ಟೆ ಮತ್ತು ಧರ್ಮ’ ಎನ್ನುವ ಕವಿತೆ ವಾಚಿಸಿದರು.
ಚುನಾವಣೆ ಆಮಿಷಗಳ ಬಗ್ಗೆ ಜಾಗೃತಿ:
ಬರಹಗಾರ ಹಾಗೂ ವಕೀಲ ಅಯ್ಯಣ್ಣ ನಾಯಕ ಪಾಮನಕಲ್ಲೂರು ಚುನಾವಣೆಯಲ್ಲಿ ಹೆಂಡ, ಸೀರೆ, ಹಣ ಹಂಚಿ ಮತದಾರರಿಗೆ ಆಮಿಷ ವಡ್ಡುವ ಮೂಲಕ ಮತ ಪಡೆಯುವ ರಾಜಕಾರಣಿಗಳ ಬಗ್ಗೆ ‘ಚುನಾವಣೆ ಬಂತಣ್ಣಾ’ ಎನ್ನುವ ಕವನ ಮೂಲಕ ಮತದಾರರು ಎಚ್ಚರಿಸಿದರು. ಮತದಾನದಲ್ಲಿ ದೇಶದ ಭವಿಷ್ಯ ಅಡಗಿದೆ. ಧನದಾಹಿ, ಭ್ರಷ್ಟ, ಕೋವುವಾದಿ ರಾಜಕಾರಣಿಗಳನ್ನು ಧಿಕ್ಕರಿಸಿ ಉತ್ತಮ ದೇಶ ಕಟ್ಟಲು ಕವನದ ಮೂಲಕ ಕರೆ ನೀಡಿದರು.
ವಿದ್ಯಾರ್ಥಿನಿ ಬಿ.ಎಂ.ಪ್ರಿಯಾಂಕ ‘ಯಾರಿಗೆ ಬಂತು ಸ್ವಾತಂತ್ರ್ಯ ಎಂದು ಪ್ರಶ್ನಿಸುವ ಧ್ವನಿಯಲ್ಲಿಯೇ ತಮ್ಮ ಕವನ ವಾಚಿಸಿದಳು. ಶೇಖ ಮೊಹಮ್ಮದ್ ಜಿ ‘ಇದೊಮ್ಮೆ ನಾನು ಹೆಣ್ಣಲ್ಲ ಸುಮ್ನನಿರಿ’ ಎಂಬ ಕವನ ವಾಚಿಸಿ, ಡಾ.ಅನಸೂಯ ವೈ.ಟಿ ಅವರ ‘ಸೂಳೆ’ ಕವನ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯ ವಿವಿಧ ಮಜಲುಗಳನ್ನು ಸಹೃದಯರ ಎದುರು ತೆರೆದಿಟ್ಟಿತ್ತು. ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಬಾಳಿ ‘ಬಡಿಸುವಳು ಬರಿದಾಗದಂತೆ!’ ಎನ್ನುವ ಕವನ, ಸಹಜೀವನ ಪದ್ದತಿ ಬಗ್ಗೆ ರೇಣುಕಾ ಹೆಳವರ್ ಕವನ ವಾಚಿಸಿ, ಉಳಿದಂತೆ ಇತರೆ ಯುವಕವಿಗಳು ಹಂಪಿಯ ಇತಿಹಾಸ, ನಾಡು ನುಡಿ ಹಾಗೂ ತಂದೆ-ತಾಯಿ, ಧರ್ಮ ರಾಜಕಾರಣದ ಕುರಿತಾದ ಕವನಗಳನ್ನು ವಾಚಿಸಿದರು.
ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಗಿ ತಹಶೀಲ್ದಾರ್ ನೇತ್ರಾವತಿ, ಸಾಹಿತಿ ಡಾ.ಚನ್ನಬಸಪ್ಪ ಚಿಲ್ಕರಾಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೇಗೌಡ, ಉಪನ್ಯಾಸಕ ಎಂ. ಆರ್.ವಾಗೀಶ, ಕನ್ನಡ ಸಾಹಿತ್ಯ ಪರಿಷತ್ ನಿಶ್ಚಿ ರುದ್ರಪ್ಪ ಸೇರಿದಂತೆ ಸಾಹಿತಿಗಳು ಇತರರು ಪಾಲ್ಗೊಂಡಿದ್ದರು.
























