
ಬೆಂಗಳೂರು,ಜೂ.೯- ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮುನಿರಾಜು (೨೨) ಎಂಬ ಯುವಕನ ಮೃತದೇಹ ಏರ್‌ಪೋರ್ಟ್ ರಸ್ತೆಯ ಮಾಲ್ ಆಫ್ ಏಷ್ಯಾ ಮುಂಭಾಗದ ರಸ್ತೆಯಲ್ಲಿ ರಾತ್ರಿ ೧೨:೩೦ರ ಸುಮಾರಿಗೆ ಕಂಡುಬಂದಿದೆ. ಮೃತದೇಹ ಗಮನಿಸಿರುವ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿರುವುದು ಕಂಡು ಬಂದಿದ್ದು, ಮೇಲಿನಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೊಡಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತ ಮುನಿರಾಜು ಹೆಬ್ಬಾಳದ ಶಿವಶಂಕರ ಲೇಔಟ್ ನಿವಾಸಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಸಂಜೆ ಸ್ನೇಹಿತರನ್ನು ಭೇಟಿಯಾಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರಟಿದ್ದ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ಸೇತುವೆಯಿಂದ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಹೆದ್ದಾರಿಯಲ್ಲಿನ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಓಯೋ ರೂಮಿನಲ್ಲಿ ಪ್ರಿಯತಮೆ ಹತ್ಯೆ
ಬೆಂಗಳೂರು, ಜೂ.೯- ಅನೈತಿಕ ಸಂಬಂಧ ಹೊಂದಿದ್ದ ಶಂಕೆಯಿಂದ ಟೆಕ್ಕಿ ಪ್ರಿಯಕರ, ತನ್ನ ಪ್ರಿಯತಮೆಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹರಿಣಿ (೩೬) ಕೊಲೆಯಾದ ಪ್ರಿಯತಮೆ ಟೆಕ್ಕಿ ಯಶಸ್ (೨೫) ಕೊಲೆ ಆರೋಪಿ. ಇಬ್ಬರೂ ಕೆಂಗೇರಿ ನಿವಾಸಿಗಳಾಗಿದ್ದು, ಪೂರ್ಣ ಪ್ರಜ್ಞಾ ಲೇಔಟ್‌ನ ಓಯೋ ರೂಂ ನಲ್ಲಿ ಘಟನೆ ನಡೆದಿದೆ.
ಕಳೆದ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪ್ರಿಯತಮೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೋಪಗೊಂಡಿದ್ದ ಟೆಕ್ಕಿ ಯಶಸ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.