
ಮಂಗಳೂರು, ಎ.೭: ಗ್ಯಾಸ್ ವಿತರಣೆ ವಿಳಂಬ ಮಾಡಿ ಏಜನ್ಸಿಗಳು ಅಕ್ರಮ ದಂಧೆಗಿಳಿದಿದೆ ಅಮೇರಿಕಾ-ಇರಾನ್ ಯುದ್ಧದ ಲಾಭ ಪಡೆಯಲು ಗ್ಯಾಸ್ ಮಾಫಿಯಾಗಳು ಸಕ್ರಿಯವಾಗಿದ್ದು, ಅಕ್ರಮ ದಂಧೆ ತಡೆಯಲು ದ.ಕ. ಜಿಲ್ಲಾಡಳಿತ ವಿಫಲವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು.
ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಸಮರ್ಪಕ ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದ ಎದುರು ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಗ್ಯಾಸ್ ಅಭಾವ ಇದ್ದರೂ ಮಂಗಳೂರಿನ ಎಚ್‌ಪಿಸಿಎಲ್ ಗ್ಯಾಸ್ ಸ್ಥಾವರಗಳಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ೩೦೦ರಷ್ಟು ಹೆಚ್ಚುವರಿ ಬುಲೆಟ್ ಟ್ಯಾಂಕರ್‌ಗಳು ಗ್ಯಾಸ್ ತುಂಬಿಸಿ ಹೋಗುತ್ತಿವೆ ಎಂದು ಆರೋಪಿಸಿದ ಇಮ್ತಿಯಾಝ್ ದೇಶ ವಿಷಮ ಪರಿಸ್ಥಿತಿಯಲ್ಲಿರುವಾಗ ದೇಶದಲ್ಲಿ ಗ್ಯಾಸ್ ಅಭಾವ ಸೃಷ್ಟಿಸಿ ಅಧಿಕ ಲಾಭ ಗಳಿಸುವ ಹುನ್ನಾರಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು.
ಗ್ಯಾಸ್ ಏಜನ್ಸಿಗಳು ಅಧಿಕ ಲಾಭಕ್ಕಾಗಿ ಅಕ್ರಮ ದಂಧೆಯಲ್ಲಿ ತೊಡಗಿದೆ. ಕಾಳ ಸಂತೆಯಲ್ಲಿ ಗ್ಯಾಸ್ ಮಾರಾಟ ನಿಲ್ಲಿಸಬೇಕು. ಸಮರ್ಪಕ ಗ್ಯಾಸ್ ವಿತರಣೆ ಕ್ರಮಗೊಳ್ಳಲು ಏಜನ್ಸಿಗಳು ವಿಫಲವಾದರೆ ಡಿವೈಎಫ್‌ಐ ಕಾರ್ಯ ಕರ್ತರು ಗ್ಯಾಸ್ ಏಜನ್ಸಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಇಮ್ತಿಯಾಝ್ ಎಚ್ಚರಿಕೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಜನರು ಗ್ಯಾಸ್ ಪಡೆಯಲು ಏಜನ್ಸಿ ಮುಂದೆ ಸಾಲು ನಿಂತಿದ್ದರೂ ಕೇಂದ್ರ ಸರಕಾರದ ಮಂತ್ರಿಗಳು ದೇಶದಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಸರಕಾರ ನಾಗರಿಕರ ಸರಬರಾಜು ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರಲ್ಲದೆ ಅಡುಗೆ ಅನಿಲದ ಅಕ್ರಮ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಜಗದೀಶ್ ಬಜಾಲ್, ಖಾಲಿದ್ ಹರೇಕಳ, ತೌಸೀಫ್ ಬೈಕಂಪಾಡಿ, ಪ್ರವೀಣ್ ಕೊಂಚಾಡಿ, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಯೋಗೀತಾ ಸುವರ್ಣ, ಸಾಮಾಜಿಕ ಮುಂದಾಳುಗಳಾದ ಮಹಾಬಲ ದೆಪ್ಪೆಲಿಮಾರ್, ಜೆರಾಲ್ಡ್ ಟವರ್ಸ್, ರವಿಚಂದ್ರ ಕೊಂಚಾಡಿ, ಅಬೂಬಕ್ಕರ್ ಜಲ್ಲಿ, ಉಮರಬ್ಬ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಹ ಕಾರ್ಯದರ್ಶಿ ರಿಝ್ವಾನ್ ಖಂಡಿಗ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರ್ ವಂದಿಸಿದರು.























