
ವಾಷಿಂಗ್ಟನ್, ಮಾ.14- ಪಶ್ಚಿಮ ಏಷ್ಯಾದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದೆ ಈ ನಡುವೆ ಅಮೇರಿಕಾ ನೇತೃತ್ವದ ಸೇನಾ ಪಡೆಗಳ ಆಕ್ರಮಣ ಮತ್ತು ತಿರುಗೇಟಿಗೆ ಇರಾನ್ ಸಂಪೂರ್ಣವಾಗಿ ಸೋತಿದ್ದು ಒಪ್ಪಂದ ಬಯಸುತ್ತಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಸಾರಿರುವ ಯುದ್ಧ ಇಂದಿಗೆ 15ನೇ ದಿನಕ್ಕೆ ಕಾಲಿಟ್ಟಿದ್ದು ಇರಾನ್‍ನ ಪ್ರಮುಖ ಮೂಲ ಸೌಕರ್ಯ ಮತ್ತು ಇಂಧನ ತೈಲ ಸಂಗ್ರಹಗಾರಗಳನ್ನು ಗುರಿಯಾಗಿಸಿಕೊಂಡು ಅಮೇರಿಕಾದ ಸೇನಾ ಪಡೆಗಳು ದಾಳಿ ನಡೆಸಿವೆ. ಅಮೇರಿಕಾ ನೀಡಿರುವ ಏಟಿಗೆ ಪದರುಗಟ್ಟಿರುವ ಇರಾನ್ ಸೋತು ಸುಣ್ಣವಾಗಿ ಒಪ್ಪಂದ ಮಾಡಿಕೊಳ್ಳಲು ಬಯಸಿದೆ ಎಂದು ತಿಳಿಸಿದ್ದಾರೆ. ಶ್ವೇತಭವನದಲ್ಲಿ ಸುದ್ಧಿಗಾರೊಂದಿಗೆ ಮಾತನಾಡಿದ ಅವರು ಇಸ್ರೇಲ್ ಮತ್ತು ಅಮೆರಿಕ ಜತೆಗೂಡಿ ಇರಾನ್ ಮೇಲೆ ನಡೆಸುತ್ತಿರುವ ಸಂಘರ್ಷ ಎರಡನೇ ವಾರ ಮುಗಿಯವ ಹಂತಕ್ಕೆ ಬಂದಿದೆ, ಜೊತೆಗೆ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಅಪಾಯಕಾರಿ ಬಿಕ್ಕಟ್ಟುಗಳಲ್ಲಿ ಒಂದಾಗಿ ವೇಗವಾಗಿ ಉಲ್ಬಣಗೊಂಡಿದೆ. ಅಮೆರಿಕ ಸೇನಾ ಪಡೆಗಳ ದಾಳಿ ಇರಾನ್ ಸೋತು ಹೋಗಿದೆ ಎಂದಿದ್ದಾರೆ. ಇರಾನ್‍ನ ನಿರ್ಣಾಯಕ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದಲ್ಲಿಪ್ರತಿಯೊಂದು ಮಿಲಿಟರಿ ನೆಲೆಯ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿ ನಾಶಪಡಿಸಿದೆ . ಖಾರ್ಗ್ ದ್ವೀಪ ಇರಾನ್‍ನ ಪ್ರಮುಖ ತೈಲ ರಫ್ತು ಕೇಂದ್ರ ಮತ್ತು ನಿರ್ಣಾಯಕ ಇಂಧನ ಜೀವನಾಡಿಯಾಗಿದೆ. ಇಲ್ಲಿ ನಡೆಯುವ ಯಾವುದೇ ದಾಳಿ ಜಾಗತಿಕ ತೈಲ ಸರಬರಾಜನ್ನು ಅಡ್ಡಿಪಡಿಸಿದೆ. ಹೀಗಾಗಿ ಇರಾನ್ ಮಾತುಕತೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಈ ದಾಳಿಯು ಪ್ರದೇಶದಲ್ಲಿ ನಡೆಸಲಾದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯಾಗಿದೆ, ಇರಾನ್‍ನ ಕಿರೀಟ ರತ್ನವಾದ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶಮಾಡಲಾಗಿದೆ ಎಂದಿದ್ದಾರೆ.
ಯುದ್ಧದ ಆರಂಭದ ದಿನ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‍ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿ, ಇರಾನ್‍ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಕೊಂದು, ಇರಾನ್‍ನ ಅನೇಕ ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದಾರೆ.
ಅಮೆರಿಕ ನಡೆಸುತ್ತಿರುವ ದಾಳಿಗೆ ಹೆದರಿಯವ ಇರಾನ್ ಅಮೆರಿಕ ಜೊತೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ.
ಅಮೆರಿಕದ ಸೇನಾ ಪಡೆಗಳು ಇರಾನ್‍ಗೆ ಬಿಸಿ ಮುಟ್ಟಿಸಿವೆ, ಅಮೆರಿಕದ ಜೊತೆ ಯುದ್ಧ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿತಿರುವ ಇರಾನ್ ಮಾತುಕತೆ ಮೂಲಕ ಯುದ್ಧ ನಿಲ್ಲಿಸಲು ಬಯಸುತ್ತಿದೆ ಎಂದಿದ್ದಾರೆ.
ಈ ನಡುವೆ ಬಾಗ್ದಾದ್‍ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿರುವ ಹೆಲಿಪ್ಯಾಡ್ ಅನ್ನು ದ್ವಂಸ ಮಾಡಲಾಗಿದೆ ಎಂದು ಇರಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
























