Home ಜಿಲ್ಲೆ ಮೈಸೂರು ಯಶಸ್ವಿಗೊಂಡ ಹನುಮಾನ್ ಸ್ಮರಣೆ

ಯಶಸ್ವಿಗೊಂಡ ಹನುಮಾನ್ ಸ್ಮರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.15:-
“ಜಯ ಹನುಮ, ರಾಮಸುತ ಹನುಮ”, “ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ” ಇಂತಹ ಹನುಮಾನ್ ಚಾಲೀಸಾ ಪ್ರತಿ ಸಾಲುಗಳೂ ನಾದ, ಶೃತಿ, ಲಯ, ತಾಳಗಳನ್ನೂ ಮೀರಿದ ಭಾವ ಪರವಶತೆ ಎಕಕಾಲದಲ್ಲಿ 50 ಸಾವಿರಕ್ಕೂ ಹೆಚ್ಚು ಭಕ್ತರು 18 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಹನುಮ ನಾಮ ಸ್ಮರಿಸಿದರು.


ಚಾಲೀಸಾ ಗಾಯನದ ನಡುವೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಂಜನೇಯನ ಅವತಾರ, ಸಾಧನೆ, ಸಾಹಸ ಹಾಗೂ ಗುಣಸ್ವಭಾವಗಳನ್ನು ಪ್ರವಚನ ರೂಪದಲ್ಲಿ ಪ್ರಸ್ತುತಪಡಿಸಿದರು. ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬೆಳಗ್ಗೆ 8ರಿಂದಲೇ ಭಕ್ತರು ಮೈದಾನದತ್ತ ಆಗಮಿಸಿ ಪ್ರತಿ ಭಕ್ತರಿಗೂ ಹನುಮಾನ್ ಚಾಲೀಸಾ ಮುದ್ರಿತ ಪ್ರತಿಗಳು ಹಾಗೂ ಕೇಸರಿ ಧ್ವಜವನ್ನು ಸ್ವಯಂ ಸೇವಕರು ಹಂಚಿದರು. ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ವೇದಿಕೆಗೆ ಆಗುತ್ತಿದ್ದಂತೆಯೇ ಭಕ್ತರಿಂದ ಹರ್ಷೋದ್ಘಾರ ಮೊಳಗಿತು. `ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕೀ’ ಎಂಬ ಜಯಘೋಷದೊಂದಿಗೆ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರಕಾಂಡದ ಕಥಾ ನಿರೂಪಣೆಯ ಜತೆಯಲ್ಲೇ ನಿರಂತರವಾಗಿ ಎರಡು ಗಂಟೆಗಳ ಕಾಲ ಪಾರಾಯಣ ನೆರವೇರಿತು. ಮೈದಾನದಲ್ಲಿದ್ದ ಸಹಸ್ರಾರು ಜನರು ಏಕಕಾಲಕ್ಕೆ ಅಚ್ಚುಕಟ್ಟಾದ ವಾದ್ಯ ಪರಿಕರಗಳ ಹಿಮ್ಮೇಳದೊಂದಿಗೆ ಒಟ್ಟು 18 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡಿದರು. ಅವಧೂತ ದತ್ತಪೀಠದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನಗೊಂಡಿತು.


ಪಾರಾಯಣ ಮಹಾಯಜ್ಞದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಕುಳಿತ ಸ್ಥಳಕ್ಕೇ ಅನ್ನ ಪ್ರಸಾದ ವಿತರಣೆ ಮಾಡಲಾಯಿತು. ರೈಸ್ ಬಾತ್, ಕೇಸರಿ ಬಾತ್ ಹಾಗೂ ವಡೆಯನ್ನು ಪ್ಯಾಕ್ ಮಾಡಿ ಭಕ್ತರಿಗೆ ನೀಡಲಾಯಿತು. ಸ್ವಯಂ ಸೇವಕರಿಂದ ಪ್ರಸಾದ ಹಾಗೂ ಕುಡಿಯುವ ನೀರು ಹಂಚಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಹನುಮದ್ ರಕ್ಷಾ ಸೂತ್ರ ನೀಡಲಾಯಿತು.
ಹೋಮ: ಹನುಮಾನ್ ಚಾಲೀಸಾ ಪಾರಾಯಣದ ಭಾಗವಾಗಿ ವೇದಿಕೆ ಸಮೀಪದ ಪವಮಾನ ಹೋಮ ನೆರವೇರಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ತೀರ್ಥ ಗಣ್ಯರೊಂದಿಗೆ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು. ಆಶ್ರಮದ ವೇದ ಶಾಲೆಯ ಪ್ರಮುಖರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಶಾಸ್ತ್ರೋಕ್ತವಾಗಿ ಹೋಮ ಕಾರ್ಯಗಳು ನೆರವೇರಿದವು. ಪೂರ್ಣಾಹುತಿಯ ವೇಳೆ ವೇದ ಘೋಷಗಳು ಮೊಳಗಿದವು. ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞದ ಸಂದರ್ಭದಲ್ಲಿ ಇಡೀ ಮಹಾರಾಜ ಕಾಲೇಜು ಮೈದಾನ ಕೇಸರಿ ಮಯವಾಗಿ ಮಾರ್ಪಟ್ಟಿತ್ತು.
ವಿದೇಶಿಗರು ಭಾಗಿ: ಹನುಮಾನ್ ಚಾಲಿಸ ಪಾರಾಯಣದಲ್ಲಿ ವಿದೇಶಿಗರೂ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಹನುಮಾನ್ ಪಾರಾಯಣವನ್ನು ಪಠಿಸಿದರು. ಮಾತ್ರವಲ್ಲದೆ, ನೆರದಿದ್ದ ಭಕ್ತರೊಂದಿಗೆ ಅವರು ಸೇರಿ ಹನುಮ ಸ್ಮರಣೆ ಮಾಡಿ ಗಮನ ಸೆಳೆದರು.


ಮಹಾಯಜ್ಞಕ್ಕೆ ಕುಟುಂಬದೊಂದಿಗೆ ಬಂದ ವಸಿಷ್ಠಸಿಂಹ:
ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ನಗರದ ಮಹಾರಾಜ ಮೈದಾನದಲ್ಲಿ ನಡೆದ ಶ್ರೀ ಹನುಮಾನ್ ಚಾಲೀಸ್ ಪಾರಾಯಣ ಮಹಾಯಜ್ಞದಲ್ಲಿ ಭಾಗಿಯಾದ ಚಲನಚಿತ್ರ ನಟ ವಸಿಷ್ಟ ಸಿಂಹ ನಟಿ ಹರಿಪ್ರಿಯ ಮಗನೊಂದಿಗೆ ಜೋಡಿ ಭಾಗಿಯಾಗಿ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು ನಂತರ ಹನುಮಾನ್ ಚಾಲೀಸ್ ಪಠಿಸುವ ಬಂದಂತ ಮೂಲಕ ಎಲ್ಲರ ಗಮನ ಸೆಳೆದರು.
ಇದೆ ಸಂದರ್ಭದಲ್ಲಿ ಶ್ರೀ ಶ್ರೀ ದತ್ತ ವಿಜಯಾನಂದ ಸ್ವಾಮಿಗಳು, ಶಾಸಕರಾದ ಟಿ.ಎಸ್ ಶ್ರೀವತ್ಸ, ಬಿಜೆಪಿ ಮುಖಂಡರಾದ ರಾಜೇಂದ್ರ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಕಡಕೋಳ ಜಗದೀಶ್, ಮುಖಂಡರಾದ ಪ್ರದೀಪ್ ಕುಮಾರ್, ಕೇಬಲ್ ಮಹೇಶ್, ವಿಪ್ರ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಕಾಸ್ ಶಾಸ್ತ್ರಿ, ಟಿ.ಎಸ್ ಅರುಣ್, ರಾಜಕುಮಾರ್, ಹಾಗೂ ಇನ್ನಿತರರು ಹಾಜರಿದ್ದರು.