ಭಕ್ತಿ ಚಿತ್ರ ಅಮಲಾಮೃತ ಗೀತೆಗಳ ಗುಚ್ಚದ ಬಿಡುಗಡೆ ಕಾರ್ಯಕ್ರಮ ನಿನ್ನೆಯಷ್ಟೇ ಆಚಾರ್ಯ ಪಾಠ ಶಾಲಾ ಕಾಲೇಜು ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಸಿರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಮೈಸೂರು ಮೂಲದ ಗುರುರಾಜರಾವ್.ಎಂ.ಎಸ್ ನಿರ್ಮಾಣ ಜತೆಗೆ ನಿರ್ದೇಶನ ಮಾಡಿದ್ದಾರೆ.
ಕೆ.ಎಸ್.ಗೋವಿಂದರಾಮರಾವ್ ಮುಖ್ಯ ಪಾತ್ರದಲ್ಲಿ ಬಾಹ್ಲೀಕರಾಜ, ವ್ಯಾಸರಾಜ ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅಭಿನಯಿಸಿದ್ದಾರೆ. ಉಳಿದಂತೆ ವೀರೇಂದ್ರ ಆಚಾರ್ಯ, ಸುಬ್ಬರಾವ್, ಮಾಸ್ಟರ್ ಸುಚೇಂದ್ರ, ಚೈತ್ರ ಭಾರದ್ವಾಜ್, ಯಶಸ್, ಸುಮನ್, ದೀಪಕ್, ಶ್ರೀಕಾಂತ್ ನಟಿಸಿದ್ದಾರೆ. ಹರಿದಾಸರ ಎಂಟು ಸಾಹಿತ್ಯಕ್ಕೆ ವಿದೂಷಿ ರತ್ನಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರದೀಪ್, ಸಂಕಲನ ಸ್ವಾಮಿ ಅವರದಾಗಿದೆ.
ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಆಗಮಿಸಿ ತಂಡಕ್ಕೆ ಆರ್ಶಿವಚನ ನೀಡಿದರು. ಅವರು ಮಾತನಾಡುತ್ತಾ ಪ್ರಸ್ತುತ ಸಮಾಜದಲ್ಲಿ ಅಡಕವಾಗಿರತಕ್ಕಂತ ಭಕ್ತಿಯ ಪ್ರಚೋದನೆ, ಭಗವಂತನ ಅನುಗ್ರಹ ಇದ್ದಾಗ ಮಾತ್ರ ಎಲ್ಲಾ ಪ್ರಯತ್ನಗಳು ಸಪಲವಾಗುತ್ತದೆ. ಆತನ ಭಕ್ತಿ, ಶಕ್ತಿ ಬೇಕು ಅಂದರೆ, ನಾವೆಲ್ಲರೂ ಭಜನೆ ಮಾಡೋಣ. ಅಮಲಾಮೃತ ಹೆಚ್ಚು ಜನರಿಗೆ ನಿರ್ವಿಜ್ಘವಾಗಿ ತಲುಪಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ನಿರ್ದೇಶಕರು ಹೇಳುವಂತೆ ಈ ಹಿಂದೆ ಪುರಂದರದಾಸರು ಮತ್ತು ಶ್ರೀ ಪಾದರಾಜರ ಸಾಕ್ಷಚಿತ್ರ ಸಿದ್ದಪಡಿಸಿದ್ದೆ. ಇದರ ಅನುಭವದಿಂದಲೇ ನಿರ್ದೇಶನ ಹಾಗೂ ಬಂಡವಾಳ ಹೂಡಿದ್ದೇನೆ. ಅಮಲಾ ಮತ್ತು ಅಮೃತ ಇವರೆಡು ಅ ಅಕ್ಷರದಿಂದ ಕೂಡಿದೆ. ನವ ಭಕುತಿಯ ಜ್ಙಾನಯಘ್ನದ ಫಲಕ್ಕೆ ಅಮಲ ಅಂತಲೂ, ಸಾರಕ್ಕೆ ಅಮೃತ ಎಂದು ಕರೆಯುತ್ತಾರೆ. ನವಭಕುತಿ ಅಂದರೆ ಸಾಕ್ಷಾತ್ ಭಗವಂತನು ವೈಷ್ಣವ ತತ್ವದಲ್ಲಿ ನೀಡಿದ ಆದೇಶ.
ಭಕ್ತಿಯಿಂದ 64 ವಿದ್ಯೆಗಳನ್ನು ಕಲಿತವರು ಶ್ರೀ ರಾಘವೇಂದ್ರ ಸ್ವಾಮಿಗಳು. ಅವರು ಪೂರ್ವಪರದಲ್ಲಿ ಐದು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಕರ್ಮಜದೇವತೆ, ಭಕ್ತ ಪ್ರಹ್ಲಾದ, ಬಾಹ್ಲೀಕರಾಜ, ವ್ಯಾಸರಾಜ ಕೊನೆಯದಾಗಿ ಗುರುಸಾರ್ವಭೌಮ. ಇವೆಲ್ಲವು ಹುಟ್ಟಿಕೊಂಡ ಬಗೆ ಹೇಗೆ ಎಂಬುದರ ವಿವರವನ್ನು ತೋರಿಸಲಾಗಿದೆ. ರಾಯರಲ್ಲಿ ಇರೋ ನಿಷ್ಟೇ ಬೇರೆ ಯಾರಲ್ಲೂ ಕಾಣೋದಿಲ್ಲ. ಸ್ವಾಮಿಗಳ ತಪಸ್ಸಿನ ಫಲ ಎಲ್ಲಾ ಜನಾಂಗಕ್ಕೂ ಪುಣ್ಯದ ಫಲ ಸಿಕ್ಕಿದೆ. ಯಾವುದೇ ರೀತಿಯಲ್ಲಿ ಶ್ರದ್ದೆಯಿಂದ ಬೃಂದಾವನಕ್ಕೆ ನಮಸ್ಕಾರ ಮಾಡಿದಾಗ ಮಾತ್ರ ಒಳ್ಳೆಯದಾಗುತ್ತದೆ ಎಂಬ ಸಂದೇಶ ಇರಲಿದೆ ಎಂದು ಗುರುರಾಜರಾವ್.ಎಂ.ಎಸ್. ಮಾಹಿತಿ ನೀಡಿದರು.ರಾಯರ ಸನ್ನಿಧಾನಗಳಾದ ಚೆನ್ನಪಟ್ಟಣ, ಅಬ್ಬೂರುಪೇಟೆ, ಶ್ರೀರಂಗಂ, ಕುಂಬಕೋಣಂ, ಶ್ರೀ ಮುಷ್ಣಂ, ಮನ್ನಾರ್‌ಗುಡಿ, ಚಿಂತಾಮಣಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೊನೆಯಲ್ಲಿ ಹೆಂಗಳೆಯರ ಸಂಕೀರ್ತನ ಹಾಡು ಕಣ್ಣು ಹಾಗೂ ಮನಸ್ಸಿಗೆ ಮುದ ನೀಡಿತು. ಸಿನಿಮಾವು ನವೆಂಬರ್‌ದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

























