ಯಕ್ಷಗಾನಕ್ಕೆ ಉತ್ಸವದ ಸ್ವರೂಪ ಕೊಟ್ಟಿರುವುದು ಸಂಪಾಜೆಯ ಯಕ್ಷೋತ್ಸವ – ಎಡನೀರು ಶ್ರೀ

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಸಂಪಾಜೆ ಯಕ್ಷೋತ್ಸವ
ಕಾಸರಗೋಡು ಸೇರಿ ಕರಾವಳಿಯ ಉದ್ದಕ್ಕೂ ಕನ್ನಡ ಉಳಿಸಿ ಬೆಳೆಸಲು ಕಾರಣವಾಗಿರುವ ಯಕ್ಷಗಾನಕ್ಕೆ ಒಂದು ಉತ್ಸವದ ಸ್ವರೂಪ ಕೊಟ್ಟಿರುವುದು ಸಂಪಾಜೆಯ ಯಕ್ಷೋತ್ಸವ. ಕನ್ನಡ ರಾಜ್ಯೋತ್ಸವದ ದಿನದಂದೇ ಯಕ್ಷೋತ್ಸವ ನಡೆಯುತ್ತಿರುವುದು ಕನ್ನಡದ ಬೆಳವಣಿಗೆಗೆ ಪೂಕರವಾದ ಅಂಶ ಎಂದು ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಸಂಪಾಜೆಯ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ನೇತೃತ್ವದಲ್ಲಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಂಪಾಜೆ ಯಕ್ಷೋತ್ಸವ -೨೦೨೫ ಹಾಗೂ ಬ್ರಹ್ಮೈಕ್ಯ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ದೀಪ ಪ್ರಜ್ವಲಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ವಹಿಸಿದ್ದರು.
ಪ್ರಶಸ್ತಿ ಪ್ರದಾನ :
ಬೆಂಗಳೂರಿನಲ್ಲಿ ಹಿರಿಯ ವಕೀಲರು ಹಾಗೂ ಮಾಜಿ ಅಡ್ವೇಕೇಟ್ ಜನರಲ್ ಉದಯ ಹೊಳ್ಳರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಪಿಟೀಲು ವಾದಕ ವಿಠ್ಠಲ ರಾಮಮೂರ್ತಿ ಚೆನ್ನೈಯವರಿಗೆ ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ, ಮೂಡಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅವರಿಗೆ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ, ಉಜಿರೆ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್‌ರಿಗೆ ಕೇಶವಾನಂದ ಭಾರತೀ ಯಕ್ಷಗಾನಾದ್ವರ್ಯು ಪ್ರಶಸ್ತಿ, ವೇ| ಮೂ| ಕುಡುಪು ನರಸಿಂಹ ತಂತ್ರಿ ಮಂಗಳೂರು ಇವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಸಿರಿಲ್ ಪ್ರಸಾದ್ ಪಾಸ್‌ರಿಗೆ ಯಕ್ಷೋತ್ಸವ ಕಲಾಪೋಷಕ ಪ್ರಶಸ್ತಿ., ಯಕ್ಷಗಾನ ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ ಯಕ್ಷೋತ್ಸವ ಸಮ್ಮಾನ ನೀಡಲಾಯಿತು.
ಜ್ಯೋತಿಷಿ ಹಾಗೂ ಆಗಮ ಶಾಸ್ತ್ರಜ್ಞರಾದ ಪಂಜ ಭಾಸ್ಕರ ಭಟ್‌ರಿಗೆ ಗುರುವಂದನೆ ಮಾಡಲಾಯಿತು. ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯವಾದಿ ಜಿ. ಲಕ್ಷ್ಮೀಶ ರಾವ್, ಯಕ್ಷಗಾನ ಅರ್ಥಧಾರಿಗಳಾದ ಡಾ| ಎಂ.ಪ್ರಭಾಕರ ಜೋಷಿ, ಯಕ್ಷಗಾನ ಕಲಾವಿದರಾದ ವಾಸುದೇವ ರಂಗಾಭಟ್ ಮಧೂರು, ಯಕ್ಷಗಾನ ಕಲಾವಿದ ಹರೀಶ ಭಟ್ ಬಳಂತಿಮೊಗರು ಅಭಿನಂದನಾ ನುಡಿಗಳನ್ನಾಡಿದರು. ಉಡುಪಿಯ ಜಾದೂಗಾರರಾದ ಪ್ರೊ| ಶಂಕರ್ ಡಾ| ಕೀಲಾರು ಸ್ಮರಣೆ ಮಾಡಿದರು. ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಟಿ. ಶ್ಯಾಮ್ ಭಟ್ ಉಪಸ್ಥಿತರಿದ್ದರು.
ಯೋಗೀಶ್ ಶರ್ಮಾ ಬಳ್ಳಪದವು ಪ್ರಾರ್ಥಿಸಿದರು. ಗಣೇಶ್ ಭಟ್ ಬೆಂಗಳೂರು ಹಾಗೂ ಪ್ರಿಯಾಂಕ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಬಯಲಾಟ
ಯಕ್ಷೆತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ೧ ರಿಂದ ೩.೩೦ರವರೆಗೆ ಕುಶಲವ ಕಾಳಗ (ಬಡಗು) ಯಕ್ಷಗಾನ ನಡೆಯಿತು. ಮಧ್ಯಾಹ್ನ ೩.೩೦ರಿಂದ ಕಂಸ ವಿವಾಹ (ತೆಂಗು- ಬಡಗು) ಪ್ರಸಂಗ, ರಾತ್ರಿ ೧೧ ರವರೆಗೆ ಅಹಲ್ಯಾ ಶಾಪ ಪ್ರಸಂಗ, ಬಳಿಕ ಭಾರತರತ್ನ ಪ್ರಸಂಗ, ನಂತರ ಸೈಂಧವ ವಧೆ ಪ್ರಸಂಗ, ಬೆಳಗ್ಗೆ ವಿರೋಚನ ಕಾಳಗ ಯಕ್ಷಗಾನ ಪ್ರಸಂಗ ನಡೆಯಿತು.