ಟೆಲ್ ಅವೀವ್, ಅ.10 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯಡಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದ ಭದ್ರತಾ ಸಂಪುಟ ಸಭೆಯನ್ನು ನಿಲ್ಲಿಸಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿ ಆಗಿರುವ ಪ್ರಗತಿಗಾಗಿ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಯನ್ನು ಇತ್ತೀಚೆಗೆ ಅಭಿನಂದಿಸಿದ್ದರು. “ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಏರ್ಪಟ್ಟ ಒಪ್ಪಂದಕ್ಕಾಗಿ ಪ್ರಧಾನಿ ಮೋದಿ, ಪ್ರಧಾನಿ ನೆತನ್ಯಾಹು ಅವರನ್ನು ಅಭಿನಂದಿಸಿದ್ದಾರೆ” ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.
ನಂತರ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಅಧ್ಯಕ್ಷ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿ ಆಗಿರುವ ಪ್ರಗತಿಯನ್ನು ಅಭಿನಂದಿಸಲು ನನ್ನ ಸ್ನೇಹಿತ, ಪ್ರಧಾನಿ ನೆತನ್ಯಾಹು ಅವರಿಗೆ ಕರೆ ಮಾಡಿದ್ದೇನೆ.ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಹೆಚ್ಚಿನ ಮಾನವೀಯ ನೆರವು ನೀಡುವ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಯಾವುದೇ ರೂಪ ಅಥವಾ ಅಭಿವ್ಯಕ್ತಿಯ ಭಯೋತ್ಪಾದನೆಯನ್ನು ಜಗತ್ತಿನಲ್ಲಿ ಎಲ್ಲಿಯೂ ಸ್ವೀಕಾರಾರ್ಹವಲ್ಲ ಎಂದು ಪುನರುಚ್ಚರಿಸಿದೆ,” ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಮಂತ್ರಿ ಅವರ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ “ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿಯೊಂದಿಗೆ ಮಾತನಾಡಿದ್ದಾರೆ. ಒತ್ತೆಯಾಳುಗಳ ಬಿಡುಗಡೆಗೆ ಆಗಿರುವ ಒಪ್ಪಂದದ ಬಗ್ಗೆ ಪ್ರಧಾನಿ ನೆತನ್ಯಾಹು ಅವರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.” ಎಂದು ತಿಳಿಸಿದೆ.
ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯಡಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಪರವಾಗಿ ಇಸ್ರೇಲ್ ಸರ್ಕಾರ ಮತ ಚಲಾಯಿಸಿದೆ ಎಂದು ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.



























