Home ಜಿಲ್ಲೆ ಮೈಸೂರು ಮೋದಿ, ಅಮಿತ್ ಶಾ ರಾಜೀನಾಮೆ ನೀಡಲಿ

ಮೋದಿ, ಅಮಿತ್ ಶಾ ರಾಜೀನಾಮೆ ನೀಡಲಿ

ಸಂಜೆವಾಣಿ ನ್ಯೂಸ್
ಮೈಸೂರು, ಜು.23:-
ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಅಮಾನವೀಯ ದಾಳಿ, ವಿಪಕ್ಷ ನಾಯಕರ ಬಂಧನ ಖಂಡನೀಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕೆಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ನಡೆಸಲಾಗಿದೆ. ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಪೆÇಲೀಸರು ವಶಕ್ಕೆ ಪಡೆದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಘಟನೆಗೆ ಕೇವಲ ಶಿಕ್ಷಣ ಸಚಿವರಲ್ಲ, ಬದಲಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಆರ್‍ಎಸ್‍ಎಸ್ ಗೂಂಡಾಗಳು?: ಪ್ರತಿಭಟನೆ ವೇಳೆ ಸಶಸ್ತ್ರ ಸಿಆರ್‍ಪಿಎಫ್, ಪೆÇಲೀಸರ ಹೊರತಾಗಿ ಸಮವಸ್ತ್ರ ಧರಿಸದ ಹಲವು ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಇವರು ಆರ್‍ಎಸ್‍ಎಸ್ ಬೆಂಬಲಿತ ಗೂಂಡಾಗಳೇ ಎಂಬ ಸಂಶಯವಿದ್ದು, ಗೃಹ ಸಚಿವಾಲಯ ತಕ್ಷಣವೇ ಇದರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪೇಪರ್ ಲೀಕ್ ಮಾಫಿಯಾ: ಕೇಂದ್ರ ಸರ್ಕಾರ ಲಕ್ಷಾಂತರ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದು, ನೀಟ್ ಸೇರಿದಂತೆ ಪ್ರಮುಖ ಪ್ರವೇಶ ಪರೀಕ್ಷೆಗಳು ಸರಣಿ ಭ್ರಷ್ಟಾಚಾರ, ಪೇಪರ್ ಲೀಕ್ ಮಾಫಿಯಾಗೆ ಬಲಿಯಾಗಿವೆ. 2014ರಿಂದ ಇಲ್ಲಿಯವರೆಗೆ ಜೆಇಇ, ನೀಟ್ ಹಾಗೂ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸೇರಿದಂತೆ 152 ಪೇಪರ್ ಲೀಕ್ ಆಗಿವೆ. ಪ್ರಿಂಟಿಂಗ್ ಪ್ರೆಸ್, ಸಾಗಾಣಿಕೆ ಹಂತದಲ್ಲೇ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದ ಪೇಪರ್ ಚೋರಿಯಾಗುತ್ತಿದೆ. ಪರೀಕ್ಷಾ ಒತ್ತಡ ಮತ್ತು ಅಕ್ರಮಗಳಿಂದಾಗಿ ದೇಶಾದ್ಯಂತ ಸರಣಿ ವಿದ್ಯಾರ್ಥಿ ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ: ಪರೀಕ್ಷೆಗಳು, ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಉದ್ಯೋಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರ ವರ್ಷದ ಆರಂಭದಲ್ಲೇ ಸ್ಪಷ್ಟ ಮತ್ತು ಪಾರದರ್ಶಕ ವಾರ್ಷಿಕ ಪರೀಕ್ಷಾ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು ಎಂದರು.

ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹೋರಾಟವಲ್ಲ. ಎನ್‍ಎಸ್‍ಯುಐ ಮತ್ತು ಯೂತ್ ಕಾಂಗ್ರೆಸ್ ಮೊದಲ ದಿನದಿಂದಲೂ ಸಂಕಷ್ಟದಲ್ಲಿರುವ ವಿದ್ಯಾರ್ಥಿ ಕುಟುಂಬಗಳ ಜೊತೆ ನಿಂತಿವೆ. ಈ ವ್ಯವಸ್ಥಿತ ಅಕ್ರಮವನ್ನು ಜನರೆದುರು ತೆರೆದಿಡುತ್ತಿದ್ದೇವೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆಗಳ ಸೋಲಿಗೆ ಜೀವ ಕಳೆದುಕೊಳ್ಳಬೇಡಿ, ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಜಾಗೃತಿ ಮೂಡಿಸಲಾಗುವುದು ಎಂದರು.

ವಿಪಕ್ಷ ನಾಯಕರು ಸಂಸತ್ತಿನ ಒಳಗೂ ಸ್ಪೀಕರ್ ಬಳಿ ನೀಟ್ ಅಕ್ರಮದ ಕುರಿತು ಚರ್ಚೆಗೆ ಅವಕಾಶ ಕೋರಿದ್ದರು. ಆದರೆ ಸರ್ಕಾರ ಪ್ರಜಾಸತ್ತಾತ್ಮಕ ಧ್ವನಿಯನ್ನು ನಿಯಂತ್ರಿಸಲು ಯತ್ನಿಸುತ್ತಿದೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮುಖಂಡರಾದ ನಾಗೇಶ್ ಕರಿಯಪ್ಪ, ಪ್ರದೀಪ್ ಕುಮಾರ್, ಶಿವಣ್ಣ, ಗಿರೀಶ್, ಮಾಧ್ಯಮ ವಕ್ತಾರ ಇದ್ದರು.