
‘ಮಗ್ಗಿಪುಸ್ತಕ’ ಫೆ.13ಕ್ಕೆ ತೆರೆಗೆ
ಡಿಜಿಟಲ್ ಯುಗದ ದೈನಂದಿನ ಬದುಕನ್ನು ಲೆಕ್ಕಪತ್ರದಂತೆ ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನವಾಗಿ ಮೂಡಿ ಬಂದಿರುವ ಚಿತ್ರ ‘ಮಗ್ಗಿಪುಸ್ತಕ’ ಫೆಬ್ರವರಿ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೊಬೈಲ್ ಬಳಕೆಯ ಪರಿಣಾಮಗಳನ್ನು ಹೈಪರ್‌ಲಿಂಕ್ ಶೈಲಿಯಲ್ಲಿ ಹೇಳುವ ಈ ಚಿತ್ರ ಈಗಾಗಲೇ ತನ್ನ ಮೂರನೇ ಹಾಡು ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದೆ.
ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ. ಎತಿರಾಜ್ ಸ್ನೇಹಿತರೊಂದಿಗೆ ನಿರ್ಮಿಸಿದ್ದು, ನಿರ್ದೇಶಕರೂ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಸುಮಾರು 17 ವರ್ಷಗಳಿಂದ 20ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಹರಿವರಾಸನಂ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ.
ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಕ್ಷಾ ಗೌಡ ಮಾತನಾಡಿ, “ರಾಧಾರಮಣ, ಪುಟ್ಟಮಲ್ಲಿ ಧಾರಾವಾಹಿಗಳ ನಂತರ ಈ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. ಇದು ಭಾವನಾತ್ಮಕವಾಗಿ ತುಂಬಾ ಸವಾಲಿನ ಪಾತ್ರ,” ಎಂದರು.
ನಟ ಕೃಷ್ಣ ಮಹೇಶ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಒಂದು ‘ಬ್ರಿಡ್ಜ್’ ಸಿನಿಮಾ. ಮೊಬೈಲ್ ಅತಿಯಾದ ಬಳಕೆ ಜೀವನದಲ್ಲಿ ಏನೆಲ್ಲ ಬದಲಾವಣೆ ತರಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ,” ಎಂದು ಹೇಳಿದರು.
ನಿರ್ಮಾಪಕ ಯತಿರಾಜ್, “ಇದು ನಮ್ಮ ಮೊದಲ ನಿರ್ಮಾಣ. ಎಲ್ಲರೂ ಪ್ರೋತ್ಸಾಹಿಸಬೇಕು,” ಎಂದು ಮನವಿ ಮಾಡಿದರು. ದಡ್ಡ ಪ್ರವೀಣ್ ಖ್ಯಾತಿಯ ರಂಜಿತ್ ಕಾಸರಗೋಡು, ವರ್ಧನ್ ತೀರ್ಥಳ್ಳಿ ಹಾಗೂ ರಾನ್ವಿ ಶೇಖರ್ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. 17 ಜನ ಗಾಯಕರು ಹಾಡಿರುವುದು ವಿಶೇಷ. ಎಸ್.ಎಸ್. ನಾಚಪ್ಪ ಸಂಗೀತ ಸಂಯೋಜನೆ ಮಾಡಿದ್ದು, ಡಾ. ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’, ‘ಜಮೀನ್ದಾರ್’ ಚಿತ್ರಗಳಿಗೆ ಸಂಗೀತ ನೀಡಿದ್ದ ಎಂ.ಎಂ. ಕೀರವಾಣಿ ಬಹುಕಾಲದ ನಂತರ ಈ ಚಿತ್ರದ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ, ರವೀಂದ್ರ ಸೊರಗಾವಿ ಸೇರಿದಂತೆ ಅನೇಕ ಗಾಯಕರು ಗಾಯನ ನೀಡಿದ್ದಾರೆ.
ಚಿತ್ರದಲ್ಲಿ ‘ಸರ್ಕಾರಿ ಹಿರಿಯ ಪಾಠಶಾಲೆ’ ಖ್ಯಾತಿಯ ರಂಜನ್ ಕಾಸರಗೋಡು ಹಾಗೂ ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಮತ್ತಿತರರು ಅಭಿನಯಿಸಿದ್ದಾರೆ. ನಂದಕುಮಾರ್ ಅವರ ಛಾಯಾಗ್ರಹಣ ಮತ್ತು ಶಿವಕುಮಾರ್ ಅವರ ಸಂಕಲನ ಚಿತ್ರಕ್ಕಿದೆ.
“ಮಗ್ಗಿಪುಸ್ತಕ ಮಕ್ಕಳ ಚಿತ್ರವಲ್ಲ; ಇದು ಬದುಕಿನ ಲೆಕ್ಕಾಚಾರ. ನಮ್ಮ ಜೀವನವೇ ಒಂದು ಮಗ್ಗಿಪುಸ್ತಕದಂತಿದೆ. ಅದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವನ್ನು ನೀಡಿದ್ದೇನೆ. ಕೋವಿಡ್ ಸಮಯದಲ್ಲಿ ಬರೆದ ‘ಅವನಿ’ ಕಾದಂಬರಿಯನ್ನು ಆಧರಿಸಿ ಈ ಕಥೆ ರೂಪುಗೊಂಡಿದೆ. ನಾಲ್ಕು ಆಯಾಮಗಳಲ್ಲಿ ಸಾಗುವ ಹೈಪರ್‌ಲಿಂಕ್ ಕಥೆ ಕ್ಲೈಮ್ಯಾಕ್ಸ್‌ನಲ್ಲಿ ಒಂದಾಗುತ್ತದೆ,” -ಹರಿವರಾಸನಂ, ನಿರ್ದೇಶಕ



























