ಸಂಜೆವಾಣಿ ಫಲಶ್ರುತಿ
ಚಿತ್ರದುರ್ಗ,ಸೆ.೦೭: ಸಾಂಕ್ರಾಮಿಕ ರೋಗಕ್ಕೆ ನಲುಗಿದ ಗೊಲ್ಲನಕಟ್ಟೆ ಗ್ರಾಮ ಎಂಬ ಸುದ್ದಿ ಸಂಜೆವಾಣಿ ಬಿತ್ತರ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲದೆ ಕರ್ತವ್ಯ ಲೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೋಟಿಸ್ ಜಾರಿ ಮಾಡಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ ಕಳೆದ ೨೦ ದಿನಗಳಿಂದ ಸಾಂಕ್ರಾಮಿಕ ರೋಗಕ್ಕೆ ಗ್ರಾಮದ ಶೇಕಡ ೮೦% ರಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗಿ, ಈಡೀ ಗ್ರಾಮವೇ ನಲುಗಿಹೋಗಿತ್ತು. ಇಷ್ಟಾದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ, ಅಲ್ಲದೆ ಗ್ರಾಮಸ್ಥರು ವೈದ್ಯರನ್ನು ಕಳುಹಿಸುವಂತೆ ಕೇಳಿಕೊಂಡರು ಉತ್ತರಿಸದೆ ನಿರ್ಲಕ್ಷ್ಯ ತೋರಿದ್ದರು.
ಈ ಹಿನ್ನೆಲೆಯಲ್ಲಿ ಸಂಜೆವಾಣಿ ಕಳೆದ ಸೆ. ೦೨ ರಂದು ಸುದ್ದಿಯನ್ನು ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗ್ರಾಮಕ್ಕೆ ತ್ವರಿತವಾಗಿ ವೈದ್ಯರುಗಳನ್ನು ಕಳುಹಿಸಿ,
ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಜನರಿಗೆ ಚಿಕಿತ್ಸೆ ಕೊಡಿಸಿದ್ದಾರೆ.ಪ್ರಕರಣ ಸಂಬಂಧ ರಾಜ್ಯ ಸೂಕ್ಷ್ಮಾಣು ಜೀವಿ ತಜ್ಞರಾದ ಡಾ. ಶಿಲ್ಪ ರಾಜು ಮತ್ತು ರಾಜ್ಯ ಕೀಟಶಾಸ್ತ್ರಜ್ಞರಾದ ಡಾ.ನಾಜ್ ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಸಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾಂಕ್ರಾಮಿಕ ರೋಗ ತಡೆಗಟ್ಟುವ ಜಿಲ್ಲಾ ಮಟ್ಟದ ಸಭೆಗಳಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ, ಆದರೂ ಸಹ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಎಷ್ಟು ಸಭೆಗಳನ್ನು ನಡೆಸಿದ್ದಿರಿ ಎಂಬ ಬಗ್ಗೆ, ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ನಿಮ್ಮ ಜವಬ್ದಾರಿಯಾಗಿರುತ್ತದೆ, ಆದರೆ ನೀವು ಯಾವುದೇ ಮುಂಜಾಗೃತ ಕಾರ್ಯಗಳನ್ನು ರೂಪಿಸಿಕೊಂಡು ಸಾಂಕ್ರಿಮಿಕ ರೋಗವನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದು, ಇದು ನಿಮ್ಮ ಕರ್ತವ್ಯ ಲೋಪವಾಗಿರುತ್ತದೆ.
ಈ ನಿಮ್ಮ ಕರ್ತವ್ಯ ಲೋಪದ ಕುರಿತು ನಿಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಈ ನೋಟೀಸ್ ತಲುಪಿದ ೨೪ ಗಂಟೆಯೊಳಗೆ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಭಾವಿಸಿ ಪ್ರಕರಣದಲ್ಲಿ ನಿಮ್ಮನ್ನೇ ನೇರ ಹೊಣೆಗಾರರಾನ್ನಾಗಿ ಮಾಡಿ ನಿಯಮಾನುಸಾರ ಶಿಸ್ತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೋಟಿಸ್ ಜಾರಿ ಮಾಡಿದ್ದಾರೆ.
























