
ಸಂಜೆವಾಣಿ ನ್ಯೂಸ್
ಮೈಸೂರು, ಆ.30:- ಈ ಬಾರಿಯ ದಸರಾ ಮಹೋತ್ಸವ ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದೆ. ದಸರಾ ಮೆರವಣಿಗೆಯ ಸ್ವರೂಪವನ್ನೇ ಬದಲಿಸಲಾಗುತ್ತಿದ್ದು, ಮಿಲಿಟರಿ ಹಾಗೂ ಸೇನಾ ಪಡೆಗಳ ಜತೆಗೆ ಕನ್ನಡ ಚಿತ್ರರಂಗದ ನಟ-ನಟಿಯರೂ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಓವಲ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾದ ಕಾಲಕ್ಕೆ ತಕ್ಕಂತೆ ದಸರಾ ಮೆರವಣಿಗೆಯ ರೂಪದಲ್ಲೂ ಬದಲಾವಣೆ ಅಗತ್ಯವಿದೆ. ಈ ಬಾರಿ ಒಂದೇ ಪ್ರಕಾರದ ಐದು ಜಾನಪದ ಕಲಾವಿದರ ತಂಡಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಅಂತಿಮ ತೀರ್ಮಾನವನ್ನು ನಾನೇ ಕೈಗೊಳ್ಳುತ್ತೇನೆ. ಕಂಬಳದಿಂದ ಯಾವುದೇ ಪರಿಸರ ಹಾನಿಯಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯವೂ ಇಲ್ಲ ಎಂದು ಹೇಳಿದರು.
ಅದ್ದೂರಿ ದಸರಾ ನಿಲುವಿನಲ್ಲಿ ಬದಲಾವಣೆ ಇಲ್ಲ: ಬರದ ನೆಪದಲ್ಲಿ ದಸರಾವನ್ನು ಸರಳವಾಗಿ ಆಚರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ದಸರಾವನ್ನು ಅದ್ದೂರಿಯಾಗಿ ನಡೆಸುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
ಮೈಸೂರಿನ ಪ್ರವಾಸೋದ್ಯಮ ದಸರಾವನ್ನು ಅವಲಂಬಿಸಿರುವುದರಿಂದ ಸರಳ ದಸರಾ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ದಸರಾ ಉದ್ಘಾಟಕರು ಯಾರು? ದಸರಾ ಉದ್ಘಾಟಕರ ಆಯ್ಕೆ ಕುರಿತು ಹಲವರೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ತಾವೇ ಕೈಗೊಳ್ಳುವುದಾಗಿ ತಿಳಿಸಿದರು.
ಬಿಜೆಪಿಗೆ ತಿರುಗೇಟು: ನಾಗೇಂದ್ರ ಅವರು ಯಾವುದೇ ತಪ್ಪು ಮಾಡದಿದ್ದರೂ ಬಿಜೆಪಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಅವರನ್ನು ಬಲಿಪಶು ಮಾಡಿದೆ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸುವುದಾದರೆ ನಡೆಸಲಿ. ಅವರಿಗೆ ರಾಜಕೀಯ ಬೇಕಾಗಿರುವುದರಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾಗೇಂದ್ರ ಅವರ ರಾಜೀನಾಮೆ ಏಕೆ ಕೇಳಲಾಯಿತು ಎಂಬ ತಮ್ಮ ಪ್ರಶ್ನೆಗೆ ಬಿಜೆಪಿ ಇನ್ನೂ ಉತ್ತರ ನೀಡಿಲ್ಲ. ಈ ಬಗ್ಗೆ ಉತ್ತರ ನೀಡಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ಯಾರ್ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ. ಸದ್ಯಕ್ಕೆ ಆ ತಂಟೆಗೆ ಹೋಗುವುದಿಲ್ಲ. ಕುಮಾರಸ್ವಾಮಿಗೆ ಬಾಯಿ ಚಪಲ, ಮಾತನಾಡಿ ಖುಷಿಪಡಲಿ ಎಂದ ಡಿಕೆಶಿ, ತಮ್ಮ ಬಗ್ಗೆ ಇನ್ನಷ್ಟು ಟೀಕೆ ಮಾಡಲಿ ಎಂದು ವ್ಯಂಗ್ಯವಾಡಿದರು.
ತಾವು ಮುಖ್ಯಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ ಎಂಬುದನ್ನು ನಂಬಿದವನು ನಾನು ಎಂದು ಹೇಳಿದರು.

































