ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:– ಕಿವುಡ ಮತ್ತು ಮೂಕರ ಆರೋಗ್ಯ ಚಿಕಿತ್ಸೆ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋಧನೆ ಕಾರ್ಯದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಇಡೀ ದೇಶದ ಹೆಮ್ಮೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು.
ಮಾನಸ ಗಂಗೊತ್ರಿಯಲ್ಲಿರುವ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದೊಂದು ಐತಿಹಾಸಿಕ ಸಂದರ್ಭ. 1965ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕಳೆದ 6 ದಶಕಗಳಲ್ಲಿ ಸಂವಹನ ಅಸಮರ್ಥತೆ ಪರಿಹಾರಕ್ಕಾಗಿ ತಜ್ಞ ಮಾನವ ಸಂಪನ್ಮೂಲಗಳ ಸಹಾಯದಿಂದ ಅಪ್ರತಿಮ ಸೇವೆ ಸಲ್ಲಿಸುತ್ತಿದೆ. ಎಲ್ಲಾ ವಯೋಮಾನದವರಿಗೂ ಬಹುಮುಖಿ ಚಿಕಿತ್ಸೆ ಮೂಲಕ ಸೇವೆ ಒದಗಿಸುತ್ತಿರುವುದು ಅಭಿನಂದನೀಯ. ಸಮುದಾಯ ಸೇವಾ ಕೇಂದ್ರಗಳು, ಟೆಲಿ ಸರ್ವೆಕ್ಷಣೆ ಇನ್ನಿತರ ಸೇವೆಗಳ ಮೂಲಕ ದೇಶದಾದ್ಯಂತ ಜನತೆಗೆ ನೆರವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಈ ಸಂಸ್ಥೆಯ ನಾಯಕತ್ವವನ್ನು ಮಹಿಳೆಯರು ವಹಿಸಿರುವುದು ವಿಶೇಷ. ನಿರ್ದೇಶಕಿ ಡಾ.ಪುಷ್ಪಲತಾ.ಎಸ್ ಅವರು ನೀಡುತ್ತಿರುವ ಸೇವೆಯೂ ಪ್ರಶಂಸನೀಯ. ಈ ಸಂಸ್ಥೆ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಸಂಸ್ಥೆ ಪ್ರಾರಂಭಕ್ಕೆ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಭೂಮಿ ದಾನ ಮಾಡಿರುವುದು ಸ್ಮರಣೀಯ. ಇಂದು ಅವರ ಕುಟುಂಬದ ಯದಯವೀರ್ ಒಡೆಯರ್ ಉಪಸ್ಥಿತರಿರುವುದು ಖುಷಿ ತಂದಿದೆ ಎಂದರು.
ಆದರ್ಶ ಸಂಸ್ಥೆಯ ರೂಪದಲ್ಲಿ ಆಯಿಷ್ ನಿರಂತರವಾಗಿ ಶ್ರಮಿಸಬೇಕು. ಇದು ದೇಶದ ಇತರ ಸಂಸ್ಥೆಗಳಿಗೂ ಮಾದರಿಯಾಗಬೇಕು. ಈ ಸಂಸ್ಥೆಯ ಮೂಲಕ ಸ್ಥಾಪಿಸಲ್ಪಟ್ಟ ಇನ್‍ಕ್ಲೂಸಿವ್ ಥೆರಪಿ ಪಾರ್ಕ್ ದೇಶದ ಮೊದಲ ಮಾದರಿಯಾಗಿದ್ದು, ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಂವಹನ ಅಸಮರ್ಥತೆಯಿಂದ ಬಳಲುತ್ತಿರುವವರಿಗೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಆಯಿಷ್‍ನ ಆರೋಗ್ಯ ವಾಣಿ ಉತ್ತಮ ಯೋಜನೆಯಾಗಿದ್ದು, ಸಂವಹನ ಅಸಮರ್ಥತೆ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸರಳವಾಗಿ ಮಾಹಿತಿ ಲಭ್ಯವಾಗುತ್ತಿದೆ. ಈ ಮೂಲಕ ಸಂಸ್ಥೆ ರಾಷ್ಟ್ರೀಯ ನೀತಿ ರೂಪಿಸಲು ಸಹ ಸಲಹೆ ನೀಡಬಹುದು ಎಂದು ತಿಳಿಸಿದರು.
ಸರ್ಕಾರ, ತಾಂತ್ರಿಕ ಹಾಗೂ ಸಾಮಾಜಿಕ ಕಾರ್ಯಕರ್ತರ ಸಹಯೋಗದ ಮೂಲಕ, ದಿವ್ಯಾಂಗ ಜನರಿಗಾಗಿ ಮುಕ್ತ ಪರಿಸರವನ್ನು ನಿರ್ಮಿಸಬೇಕು. ಇದರಿಂದ ಅವರು ಯಾವುದೇ ಅಡಚಣೆಯಿಲ್ಲದೆ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ಸುಗಮ್ಯ ಭಾರತ ಅಭಿಯಾನ ಅಡಿಯಲ್ಲಿ ದಿವ್ಯಾಂಗ ಜನರ ಒಳಗೊಳ್ಳುವಿಕೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳು, ಸೌಕರ್ಯಗಳು ಹಾಗೂ ಸೇವೆಗಳು ದಿವ್ಯಾಂಗ-ಅನುಗುಣವಾಗಿರಬೇಕು. ಅವು ದಿವ್ಯಾಂಗರಿಗೆ ಮಾತ್ರ ಪ್ರವೇಶ ನೀಡುವುದಲ್ಲದೆ, ಅವರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಹೇಳಿದರು.
ದಿವ್ಯಾಂಗರ ಸಬಲೀಕರಣಕ್ಕೆ ಹೆಜ್ಜೆ: ಇಂದಿನ ತಂತ್ರಜ್ಞಾನ ಯುಗದಲ್ಲಿ, ವಾಕ್ ಮತ್ತು ಶ್ರವಣ ತೊಂದರೆಗಳನ್ನು ನಿವಾರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಹಳ ಮುಖ್ಯ. ಇವುಗಳ ಬಳಕೆಯಿಂದ ಸಾಮಾನ್ಯ ಜನರು ಶ್ರವಣ ಸಹಾಯಕ ಸಾಧನಗಳು ಮತ್ತು ಸಾಧನೋಪಕರಣಗಳನ್ನು ಸುಲಭವಾಗಿ ಪಡೆಯಬಹುದು.
ಕಾಕ್ಲಿಯರ್ ಇಂಪ್ಲಾಟ್‍ಗಳಂತ ಸಾಧನಗಳು ಈಗ ಲಭ್ಯವಾಗುತ್ತಿವೆ. ಇಂತಹ ಸಾಧನಗಳ ತಯಾರಿಕೆಯಲ್ಲಿ ಸ್ವಾವಲಂಬಿ ಆಗಲು ಆಯಿಷ್‍ನಂತಹ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕು. ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸಲು ಸಹಕಾರಿಯಾಗಬೇಕು. ದೇಶದಲ್ಲಿ ದಿವ್ಯಾಂಗ ಮಾನವ ಸಂಪನ್ಮೂಲಗಳನ್ನು ಶಕ್ತಗೊಳಿಸುವ ಪ್ರಮುಖ ಸಂಸ್ಥೆಯಾಗಿದೆ. ಇಲ್ಲಿ ಸ್ಥಾಪಿಸಲ್ಪಟ್ಟ ಉತ್ಕೃಷ್ಟತಾ ಕೇಂದ್ರ ಶಿಕ್ಷಣ, ವೈದ್ಯಕೀಯ, ತಾಂತ್ರಿಕ ತಜ್ಞತೆ ಹಾಗೂ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಇದು ದಿವ್ಯಾಂಗ ಜನರ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ದೇಶ-ವಿದೇಶಗಳಲ್ಲಿ ಸೇವೆ ನೀಡುತ್ತಿರುವವರು ಕೂಡ ಸಹಭಾಗಿಯಾಗಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.
ಕನ್ನಡ ಕಲಿಯಲು ಪ್ರಯತ್ನಿಸುತ್ತೇನೆ: ರಾಷ್ಟ್ರಪತಿಗಳ ಭಾಷಣಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲಿ ಭಾಷಣ ಮಾಡಿ, ವೇದಿಕೆಯಲ್ಲಿ ಕುಳಿತಿದ್ದ ಗಣ್ಯರಿಗೆ ನನ್ನ ಭಾಷೆ ಅರ್ಥವಾಗಿದೆಯೇ ಎಂದು ಕೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲು ಬಂದಾಗ, ಮುಖ್ಯಮಂತ್ರಿಗಳೆ ಕನ್ನಡ ನನ್ನ ಮಾತೃಭಾಷೆಯಲ್ಲದಿದ್ದರೂ, ನನ್ನ ದೇಶದ ಎಲ್ಲಾ ಭಾಷೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಭಾಷೆಯನ್ನು ಜೀವಂತವಾಗಿಡಲು ಮತ್ತು ಅವರ ಸಂಪ್ರದಾಯಗಳು ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಲು ಶ್ರಮಿಸಬೇಕು. ನಾನು ಖಂಡಿತವಾಗಿಯೂ ಕನ್ನಡ ಕಲಿಯಲು ಪ್ರಯತ್ನಿಸುತ್ತೇನೆ ಎಂದು ನಗುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲÀ ಥಾವರ್ ಚಂದ್ ಗೆಹ್ಲೋಟ್, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವೆ ಅನುಪ್ರಿಯಾ ಪಟೇಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದರು.




























