ಮೈಸೂರಿನಿಂದ ತಿರುಪತಿಗೆ ಹೆಚ್ಚುವರಿ ರೈಲು ಸೇವೆಗೆ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು: ಆ.09:-
ಮೈಸೂರಿನಿಂದ ತಿರುಪತಿಗೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಸಚಿವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದೇನೆ. ಆಂಧ್ರದ ಖ್ಯಾತ ಧಾರ್ಮಿಕ ಕ್ಷೇತ್ರ ತಿರುಪತಿಗೆ ಮೈಸೂರು, ಮಂಡ್ಯ, ಚಾಮರಾಜನಗರದಿಂದ ಅತಿ ಹೆಚ್ಚು ಭಕ್ತರು ಪ್ರಯಾಣಿಸುತ್ತಾರೆ. ಆದ್ದರಿಂದ ಹೆಚ್ಚುವರಿ ರೈಲ್ವೆ ಸೇವೆ ಒದಗಿಸುವ ಅಗತ್ಯವಿದೆ ಎಂದು ತಿಳಿಸಿದ್ದು, ತಿರುಪತಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರ ದೀರ್ಘಕಾಲದ ಬೇಡಿಕೆಯೂ ಇದಾಗಿದೆ. ಪ್ರಸ್ತುತ ರೈಲು ಸೇವೆ ವಿರಳವಾಗಿದೆ. ಕೆಲವು ದೀರ್ಘ ಪ್ರಯಾಣದ ಅವಧಿಯದ್ದಾಗಿದೆ. ಇದರಿಂದ ಹಿರಿಯ ನಾಗರಿಕರು, ಭಕ್ತರು ಮತ್ತು ಪ್ರವಾಸಿಗರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಸಚಿವರಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಮೈಸೂರು ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಲಭ್ಯತೆ ಮತ್ತು ನಿರ್ವಹಣಾ ಸೌಲಭ್ಯಗಳನ್ನು ಪರಿಗಣಿಸಿ, ಮೈಸೂರು ರೇಣಿಗುಂಟ, ತಿರುಪತಿ – ಮೈಸೂರು ವಂದೇಭಾರತ್ ಎಕ್ಸ್‍ಪ್ರೆಸ್ ಆರಂಭಿಸಬಹುದಾಗಿದೆ. ಈ ಅತಿ ವೇಗದ, ಆಧುನಿಕ ರೈಲು ಸೇವೆಯು ಸಾವಿರಾರು ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಪ್ರಯಾಣ ಆಯ್ಕೆ ಒದಗಿಸುತ್ತದೆ. ಇದರಿಂದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದ್ದಾರೆ.


ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದ್ದೀಕರಣ ತ್ವರಿತಗೊಳಿಸುವುದು ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ದಾರಿ ಮಾಡಿಕೊಡುವ ನಿರ್ಣಾಯಕ ಹೆಜ್ಜೆಯಾಗಿದೆ. ಅವರ ಸಕಾಲಿಕ ನಡೆಯು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.


ತಮಿಳುನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ರಾಮೇಶ್ವರಂಗೆ ಮೈಸೂರಿನಿಂದ ಇದುವರೆಗೆ ಯಾವುದೇ ನೇರ ರೈಲು ಸಂಪರ್ಕ ಇಲ್ಲ. ಇದರಿಂದ ಮೈಸೂರು ಭಾಗದ ಜನರು ಈ ತೀರ್ಥಕ್ಷೇತ್ರಕ್ಕೆ ತೆರಳಲು ಅನನುಕೂಲ ಆಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು-ರಾಮೇಶ್ವರಂ ನಡುವೆ ರೈಲು ಸಂಚಾರ ಆರಂಭಿಸುವಂತೆಯೂ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಸಚಿವರು ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.