
ಬೆಂಗಳೂರು, ಜ.13:- ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಅಧಿನಾಯಕ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಸೆಂಟ್ ಥಾಮಸ್ ಆಂಗ್ಲ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಗಹಿಸಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರಾಹುಲ್‍ಗಾಂಧಿ ಅವರು ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಹುಲ್ ರವರನ್ನು ಬರ ಮಾಡಿಕೊಂಡರು.
ಮೈಸೂರಿನ ವಿಮಾನ ನಿಲ್ದಾಣದಲ್ಲೇ ಸುಮಾರು 15 ನಿಮಿಷ ವಿಶ್ರಾಂತಿ ಪಡೆದು ರಾಹುಲ್‍ಗಾಂಧಿ ಅಲ್ಲಿಂದ ನೀಲಗಿರಿ ಜಿಲ್ಲೆಯ ಗೂಡ್ಲೂರಿಗೆ ತೆರಳಿದ್ದು, ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ರಾಹುಲ್‍ಗಾಂಧಿ ಜತೆ ಚರ್ಚೆ ನಡೆಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪರ ವಿರೋಧ ಚಟುವಟಿಕೆಗಳು ತಾರಕಕ್ಕೇರಿದ್ದು, ಸದ್ಯ ಮೇಲ್ನೋಟಕ್ಕೆ ತಣ್ಣಗಾಗಿರುವ ಪರಿಸ್ಥಿತಿ ಇರುವಾಗಲೇ ರಾಹುಲ್‍ಗಾಂಧಿ ಜತೆ ಈ ಇಬ್ಬರೂ ನಾಯಕರು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಈ ಭೇಟಿಯ ಸದಂರ್ಭದಲ್ಲಿ ರಾಹುಲ್‍ಗಾಂಧಿ ಈ ಇಬ್ಬರು ನಾಯಕರಿಗೆ ಯಾವ ಸಂದೇಶ ನೀಡಿದರು ಎಂಬುದು ಕುತೂಹಲ ಮೂಡಿಸಿದ್ದು, ಯಥಾಸ್ಥಿತಿಗೆ ಸೂಚಿಸಿದರೋ ಇಲ್ಲವೋ ಎಂಬುದು ಸಹ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್‍ಗಾಂಧಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಮೂವರೇ ಚರ್ಚೆ ನಡೆಸಿದ್ದು, ಚರ್ಚೆಯ ವಿವರಗಳು ಬಹಿರಂಗವಾಗಬೇಕಿದೆ. ರಾಹುಲ್‍ಗಾಂಧಿ ಭೇಟಿ ಚರ್ಚೆಯ ಬಗ್ಗೆ ಇವರುಗಳು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.
ರಾಹುಲ್‍ಗಾಂಧಿ ಅವರು ಗುಡ್ಲೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಸಂಜೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದು ವಿಮಾನದಲ್ಲಿ ದೆಹಲಿಗೆ ತೆರಳಲಿದ್ದು ಸಂಜೆ ಸಹ ಈ ಇಬ್ಬರೂ ನಾಯಕರು ರಾಹುಲ್‍ಜತೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವರು.
ಈ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜ್ಯ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆದಿರುವ ಚಟುವಟಿಕೆಗಳಿಗೆ ತೆರೆ ಎಳೆಯುವ ಸಂದೇಶ ರವಾನಿಸುವ ಸಾಧ್ಯತೆಗಳು ಇವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕಾಂಗ್ರೆಸ್ ಅಧಿನಾಯಕ ರಾಹುಲ್‍ಗಾಂಧಿ ಅವರನ್ನು ಸ್ವಾಗತಿಸಿ ಅವರ ಜತೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿಗೆ ಆಗಮಿಸಿ, ಸಂಜೆ ಅವರನ್ನು ಭಬೀಳ್ಕೊಟ್ಟ ನಂತರ ಬೆಂಗಳೂರಿಗೆ ವಾಪಸ್ಸಾಗುವರು.























