Home ಜಿಲ್ಲೆ ಮೈಸೂರು ಮೈಸೂರಿನಲ್ಲಿ ತ್ರಿವಿಧ ದಾಸೋಹಿಯ ಸ್ಮರಣೆ

ಮೈಸೂರಿನಲ್ಲಿ ತ್ರಿವಿಧ ದಾಸೋಹಿಯ ಸ್ಮರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.02:-
ನಗರದ ವಿವಿಧೆಡೆ ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿಯನ್ನು ಭಕ್ತಿಭಾವದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಜಯಂತಿಯ ಪ್ರಯುಕ್ತ ವಿವಿಧೆಡೆ ಪ್ರಸಾದ ವಿತರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಲಾಯಿತು. ನಗರದ ರಾಮಾನುಜ ರಸ್ತೆ, ಅಗ್ರಹಾರದ ನೂರೊಂದು ಗಣಪತಿ ದೇವಾಲಯ, ಮುಂತಾದ ಕಡೆಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸುವ ಮೂಲಕ ಪ್ರಸಾದ ವಿನಿಯೋಗ ಮಾಡಲಾಯಿತು.
ಗುರುವಂದನಾ ಕಾರ್ಯಕ್ರಮ: ಶಿವಕುಮಾರ ಮಹಾಸ್ವಾಮೀಜಿಗಳವರ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಬಸವೇಶ್ವರ ರಸ್ತೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ಬಸವೇಶ್ವರ ರಸ್ತೆಯ 13ನೇ ಕ್ರಾಸ್‍ನಿಂದ ಪ್ರಾರಂಭವಾದ ಶ್ರೀಗಳ ಭಾವಚಿತ್ರವುಳ್ಳ ಭವ್ಯ ಮೆರವಣಿಗೆಗೆ ಶಾಸಕ ಜಿ.ಡಿ.ಹರೀಶ್ ಗೌಡ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾತಂಡಗಳ ಪ್ರದರ್ಶನ, ಮೇಳಗಳು ಮತ್ತು ಸಾವಿರಾರು ಭಕ್ತಾದಿಗಳ ಜಯಘೋಷಗಳು ಮೊಳಗಿದವು. ಬಸವೇಶ್ವರ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ನೂರೊಂದು ಗಣಪತಿ ದೇವಸ್ಥಾನ, ರಾಮಾನುಜ ರಸ್ತೆ, ಕಂಸಾಳೆ ಮಾದೇವಯ್ಯ ವೃತ್ತ ಹಾಗೂ ಚಾಮುಂಡಿಪುರಂ ವೃತ್ತದ ಮೂಲಕ ಸಾಗಿ, ಸಾರ್ವಜನಿಕರ ಗಮನ ಸೆಳೆಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಶಿವಾರ್ಚಕ ಸಂಘದ ರಾಜ್ಯಾಧ್ಯಕ್ಷ ಮಲ್ಲಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿನಗರ ಪಾಲಿಕೆ ಸದಸ್ಯ ಪ್ರದೀಪ್ ಕುಮಾರ್, ಮಲ್ಲೇಶ್, ಬಸವ ಬಳಗ ಒಕ್ಕೂಟಗಳ ಅಧ್ಯಕ್ಷ ಚಂದ್ರಶೇಖರ್, ಬ್ಯಾತಳ್ಳಿ ನಾಗರಾಜ್, ವರುಣ ಮಹೇಶ್, ಸಮಾಜದ ಮುಖಂಡರಾದ ಅಂಬಳೆ ಶಿವಣ್ಣ, ಸಂದೀಪ್ ಚಂದ್ರಶೇಖರ್, ಗೆಜ್ಜಗಳ್ಳಿ ಶಂಕರ್, ಮುಕುಂದ ರಾಜೇ ಅರಸ್, ಮಹಾದೇವಸ್ವಾಮಿ, ಹಡಜನ ಗುರುಸ್ವಾಮಿ, ಪ್ರಭು, ಮಾರಶೆಟ್ಟಹಳ್ಳಿ ಚೆನ್ನಬಸವಣ್ಣ, ಮಹದೇವು, ಮಲ್ಲೇಶ್, ವೃಷಭೇಂದ್ರ, ಬಸವರಾಜು, ಜಯಣ್ಣ, ಹಡಜನ ರಾಜು, ಶಿವಣ್ಣ, ಶಿವಕುಮಾರ ಶಾಸ್ತ್ರಿ, ಮುರುಡಗಳ್ಳಿ ಕುಮಾರ್, ಎಚ್.ಎನ್.ಚಂದ್ರಶೇಖರ್, ಬಾಲಕೃಷ್ಣ ಗುಂಡಪ್ಪ, ಭಾಸ್ಕರ್, ನವೀನ್ ಸೇರಿದಂತೆ ಹಲವರು ಇದ್ದರು.
ಎಳನೀರು ವಿತರಣೆ: ಶಿವಕುಮಾರ ಸ್ವಾಮಿಗಳ ಭಕ್ತವೃಂದದ ವತಿಯಿಂದ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಅಂಗವಾಗಿ ಚಾಮುಂಡಿಪುರಂ ವೃತ್ತದಲ್ಲಿ ಭಕ್ತಾದಿಗಳಿಗೆ ಎಳನೀರು ವಿತರಿಸಲಾಯಿತು.


ಈ ವೇಳೆ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ.
ಅವರಿಗೆ ಭಾರತ ರತ್ನ ನೀಡಿ ಗೌರವಿಸಿದರೆ ಪ್ರಶಸ್ತಿಗೆ ಗೌರವ ನೀಡಿದಂತಾಗುತ್ತದೆ. ಜಾತಿ, ಮತ, ಪಂಥ, ಭಾಷೆ, ಧರ್ಮ ಎನ್ನದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ನಾಡನ್ನು ಶ್ರೀಮಂತಗೊಳಿಸಿದ ಶ್ರೀಗಳಿಗೆ ತಕ್ಷಣವೇ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಎಂದರು.


ಮತ್ತೊಬ್ಬ ಬಸವಣ್ಣ, ಕಾಯಕಯೋಗಿ, ಸಾಮಾಜಿಕ ನ್ಯಾಯದ ಹರಿಕಾರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ನಮ್ಮ ಮಠದ ಕಾಯಕದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕ್ಷೇತ್ರ ಸರ್ವತೋಮುಖವಾಗಿ ಬೆಳೆದು ಬಡವರಿಗೆ, ಅಶಕ್ತರಿಗೆ ಅನ್ನ, ವಿದ್ಯೆ ನೀಡಿ ಆಸರೆಯಾಗಲಿ ಎಂದು ಹರಸುತ್ತಿದ್ದರು. ಸಮಸ್ತ ಮಠಮಾನ್ಯಗಳಿಗೆ ಹಾಗೂ ಇಡೀ ಗುರುವೃಂದಕ್ಕೆ ತಿಲಕಪ್ರಾಯರಾಗಿದ್ದ ಪೂಜ್ಯರು ನಮ್ಮೆಲ್ಲರಿಗೂ ಮಾರ್ಗಜ್ಯೋತಿಯಾಗಿದ್ದರು ಎಂದರು.


ಕೆಪಿಸಿಸಿ ಸದಸ್ಯ ನಜರ್‍ಬಾದ್ ನಟರಾಜ್, ಮಾಜಿನಗರ ಪಾಲಿಕೆ ಸದಸ್ಯರಾದ ಜಗದೀಶ್, ಅಜಯ್ ಶಾಸ್ತ್ರಿ, ದೂರ ರಾಜಣ್ಣ, ಸುಚಿಂದ್ರ, ಹಾಗೂ ಇನ್ನಿತರರು ಹಾಜರಿದ್ದರು.