
ಸಂಜೆವಾಣಿ ನ್ಯೂಸ್
ಮೈಸೂರು: ಮಾ.11:- 17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಏನು ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ರಾಜ್ಯ ಬಜೆಟ್ ವಿಚಾರ ಕುರಿತು ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅಧಿಕಾರಿಗಳು 17 ಬಾರಿ ಬರೆದು ಕೊಟ್ಟ ಬಜೆಟ್ ಓದಿದ್ದಾರೆ ಅಷ್ಟೆ. 17 ಬಜೆಟ್‍ನಲ್ಲಿ ಇಡೀ ಮೈಸೂರಿನ ಜನ ನೆನಪಿಕೊಟ್ಟುಕೊಳ್ಳುವಂತಹ ಒಂದು ಕೆಲಸ ಮಾಡಿದ್ದಾರಾ? ಯಡಿಯೂರಪ್ಪ ಮೂರೇ ಮೂರು ವರ್ಷದಲ್ಲಿ ಶಿವಮೊಗ್ಗವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಶಿವಮೊಗ್ಗದ ಜನ ತಲೆ ತಲಾಂತರದವರೆಗೆ ನೆನಪಿಟ್ಟುಕೊಳ್ಳುವಂತೆ ಅಭಿವೃದ್ಧಿ ಮಾಡಿದ್ದಾರೆ. ಆದರೆ, 17 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಮೈಸೂರಿಗೆ ಏನು ಮಾಡಿದ್ದಾರೆ ಹೇಳಲಿ ಎಂದು ಆಗ್ರಹಿಸಿದರು.
ಫಿಲಂಸಿಟಿ ಅನ್ನೋದು ಮೆಗಾ ಸೀರಿಯಲ್ ಕಥೆ ಆಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇನ್ನೂ ಒಂದು ತಿಂಗಳು ಇರುತ್ತಾರೋ ಅಥವಾ ಗುದ್ದಾಡುತ್ತಾ ಅಧಿಕಾರ ಸಂಪೂರ್ಣ ಮಾಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪನವರ ರೀತಿ ಮೈಸೂರಿಗೆ ಮಾಡಿರುವ ಒಂದು ಘನ ಕಾರ್ಯ ಹೇಳಲಿ ಎಂದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದ್ದು ಯಡಿಯೂರಪ್ಪ. ಕಿದ್ವಾಯಿ ಆಸ್ಪತ್ರೆ ಘೋಷಣೆ ಮಾಡಿದ್ದು ಯಡಿಯೂರಪ್ಪ. ಕಿದ್ವಾಯಿ ಕಟ್ಟಡಕ್ಕೆ ಹಣ ಕೊಟ್ಟಿದ್ದು ಬಸವರಾಜ ಬೊಮ್ಮಾಯಿ. ಮೈಸೂರಿನಲ್ಲಿ ಮುಂದಿನ ತಲೆಮಾರು ಸಿದ್ದರಾಮಯ್ಯ ಹೆಸರು ಹೇಳುವಂತಹ ಒಂದೇ ಒಂದು ಕೆಲಸ ಇದೆಯಾ ಎಂದು ಪ್ರಶ್ನಿಸಿದರು.
ಯಾಕಾಗಿ ಜನ ಸಿದ್ದರಾಮಯ್ಯರನ್ನು ನೆನಪಿಸಿಕೊಳ್ಳಬೇಕು? ಸಭೆ ಸಮಾರಂಭದಲ್ಲಿ ಉಡಾಫೆ ಮಾತಾಡೋದಷ್ಟ ಸಿದ್ದರಾಮಯ್ಯಗೆ ಗೊತ್ತಾ? ಅಭಿವೃದ್ಧಿ ಕಲ್ಪನೆಯೆ ಸಿದ್ದರಾಮಯ್ಯಗೆ ಇಲ್ಲ. ಬೆಂಗಳೂರು-ಮೈಸೂರು ಹೈವೆ ರಸ್ತೆ ಸಿದ್ದರಾಮಯ್ಯ ಮಾಡಿದ್ದಾ? ಮೈಸೂರು ರಿಂಗ್ ರಸ್ತೆ ಮಾಡಿದ್ದು ಸಿದ್ದರಾಮಯ್ಯನಾ? ಮೈಸೂರಿಗೆ ಸಿದ್ದರಾಮಯ್ಯರ ಒಂದೇ ಒಂದು ಶಾಶ್ವತ ಕೊಡುಗೆ ಏನು ಹೇಳಿ ಎಂದರು.
ಬೃಹತ್ ಮಹಾನಗರ ಪಾಲಿಕೆ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ತೋಟದ ಜಾಗಗಳ ಮೌಲ್ಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜಾತಿ ಬಾಂಧವರ ಜಾಗ ಎಲ್ಲವನ್ನು ಪಾಲಿಕೆ ವ್ಯಾಪ್ತಿಗೆ ತಂದು ಆಸ್ತಿ ಮೌಲ್ಯ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಸದ ರಾಶಿ ತೆರವುಗೊಳಿಸುವಲಿ ವಿಫಲ: ಮೈಸೂರಿನ ರಿಂಗ್ ರಸ್ತೆ ಸೇರಿದಂತೆ ನಗರದ ವಿವಿಧೆಡೆ ತುಂಬಿ ತುಳುಕಾಡುತ್ತಿರುವ ಕಸದ ರಾಶಿ ತೆರವುಗೊಳಿಸುವಲ್ಲಿ ಪಾಲಿಕೆ ವಿಫಲರಾಗಿದೆ. ನಾನು ಸಂಸದನಾಗಿದ್ದ ಅವಧಿಯಲ್ಲಿ ರಿಂಗ್ ರಸ್ತೆಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಮತ್ತು ಕಸದ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಂಡಿದ್ದೆ. ರಿಂಗ್ ರಸ್ತೆಯ ಸುತ್ತ 4 ದಿಕ್ಕಿನಲ್ಲಿ ಭಾಗ ಮಾಡಿ ಕಸದ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ಆಯಾಯ ಭಾಗದ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯತಿಯವರು ಕಸ ವಿಲೇವಾರಿ ಮಾಡುವಂತೆ ಸೂಚಿಸಲಾಗಿತ್ತು. ಆದರೀಗ ಮತ್ತೆ ರಿಂಗ್ ರಸ್ತೆಯ ಸುತ್ತಲೂ ಕಸದ ರಾಶಿ ನಿರ್ಮಾಣವಾಗಿದೆ. ಇದಕ್ಕೆ ಪಾಲಿಕೆಯ ಬೇಜವಾಬ್ದಾರಿಯೇ ಕಾರಣ. ಇನ್ನು ಮುಂದಾದರು ಮಹಾನಗರ ಪಾಲಿಕೆ ಆಡಳಿತ ವರ್ಗ ಎಚ್ಚೆತ್ತುಕೊಳ್ಳಬೇಕು. ಗಬ್ಬು ನಾರುತ್ತಿರುವ ಕಸದ ರಾಶಿ ತೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಫ್ಲೆಕ್ಸ್ ತೆರವಿಗೆ ಮನವಿ: ನಗರದಲ್ಲಿ ಫ್ಲೆಕ್ಸ್ ತೆಗೆಸದಿದ್ದರೆ ನಾವೇ ಫ್ಲೆಕ್ಸ್‍ಗಳನ್ನು ಕಿತ್ತು ನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಹಾಕುತ್ತೇವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.
ಹುಣಸೂರು ಮುಖ್ಯ ರಸ್ತೆಯಲ್ಲಿರುವ ಕಲಾಮಂದಿರದ ಪಕ್ಕದ ಜಾಗದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲು ಅನುಮತಿ ಕೋರಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ನಗರ ಮಾಹಿತಿ, ಮಾರ್ಗದರ್ಶಕ ಫಲಕಗಳ ಮೇಲಿನ ಫ್ಲೆಕ್ಸ್ ಹಾಗೂ ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಫ್ಲೆಕ್ಸ್‍ಗಳನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರಿನಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಫ್ಲೆಕ್ಸ್ ತೆರವಿಗೆ ಮಹಾನಗರ ಪಾಲಿಕೆಗೆ 15 ದಿನಗಳ ಹಿಂದೆ ಮನವಿ ಮಾಡಿದ್ದೆವು. ಆದರೆ, 15 ದಿನವಾದರೂ ಒಂದೇ ಒಂದು ಫ್ಲೆಕ್ಸ್ ತೆರವು ಮಾಡಿಲ್ಲ. ಪಾಲಿಕೆ ಆಯುಕ್ತರು ಒಂದೇ ಒಂದು ದಿನವೂ ಜನರ ಸಮಸ್ಯೆ ಆಲಿಸಿಲ್ಲ. ನಾವು ಕೊಟ್ಟ ಮನವಿಗೆ ಆಯುಕ್ತರು ಬೆಲೆ ಕೊಟ್ಟಿಲ್ಲವೆಂದರೆ ಜನರ ಮನವಿಗೆ ಆಯುಕ್ತರು ಸ್ಪಂದಿಸುತ್ತಾರಾ ಎಂದು ಕಿಡಿಕಾರಿದರು.
ಸಿಎಂ ಬಂದಾಗ ಅವರ ಹಿಂದೆ ನಿಂತು ಕೊಳ್ಳುವುದು, ಸಲಾಂ ಹೊಡೆಯುವುದಷ್ಟೆ ಪಾಲಿಕೆ ಆಯುಕ್ತರ ಕೆಲಸನಾ? ಮೈಸೂರಿನವರು ಬಹಳ ತಾಳ್ಮೆ ಜನ. ತಾಳ್ಮೆ ಮುಗಿದ ಮೇಲೆ ಜನರೆ ತಿರುಗಿ ಬಿದ್ದರೆ ಯಾರಿಗೂ ಉಳಿಗಾಲವಿಲ್ಲ. ಏರ್ ಕಂಡಿಷನ್ ಕಚೇರಿಯಿಂದ ಹೊರಗೆ ಬಂದ ಜನರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ, ಎಂ.ಸತೀಶ್, ಗಿರೀಶ್ ಪ್ರಸಾದ್, ರಾಮಣ್ಣ, ಉಮೇಶ್, ಜಗದೀಶ್, ಮುಖಂಡರಾದ ದಿನೇಶ್ ಗೌಡ, ಎಸ್.ಕೆ.ದಿನೇಶ್, ಪರಮೇಶಗೌಡ, ಸುರೇಶ್, ಮಹೇಶ್, ಕಾರ್ತಿಕ್, ಶ್ರೀನಿವಾಸ್ ಮೊದಲಾದವರು ಇದ್ದರು.





















