
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರಗಳ ಹುಡುಕಾಟ ಹೆಚ್ಚಾಗುತ್ತಿರುವ ಸಮಯದಲ್ಲಿ, ಪೌರಾಣಿಕ ತಳಹದಿ ಮತ್ತು ಥ್ರಿಲ್ಲಿಂಗ್ ಆಕ್ಷನ್ ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ ಬಹು ನಿರೀಕ್ಷಿತ ‘ಹಯಗ್ರೀವ’ ಸಿನಿಮಾ. ಈಗಾಗಲೇ ಬಿಡುಗಡೆಯಾದ ಟ್ರೇಲರ್ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿರುವ ಈ ಚಿತ್ರ ಕುರಿತಂತೆ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.
ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ ಈ ಚಿತ್ರ ನಮ್ಮ ಸಂಸ್ಥೆಯ ಮೂರನೇ ಪ್ರಯತ್ನ ಎಂದು ನಿರ್ಮಾಪಕಿ ಸಮೃದ್ಧಿ ಮಂಜುನಾಥ್ ಹೇಳಿದರು. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಸಂಪೂರ್ಣ ಮೌಲ್ಯ ಸಿಗುವ ಸಿನಿಮಾ. ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರ ಪ್ರೋತ್ಸಾಹ ಇರಲಿ” ಎಂದರು.
ಕಥೆಯನ್ನು ಮೆಚ್ಚಿ ಬೆಂಬಲ ನೀಡಿದ ನಿರ್ಮಾಪಕರಿಗೆ ಧನ್ಯವಾದ ಹೇಳಿದ ನಿರ್ದೇಶಕ ರಘುಕುಮಾರ್ ಓ.ಆರ್, “ಈ ಚಿತ್ರದ ಕಥೆ ಇಂಡಿಯನ್ ಮೈಥಾಲಜಿಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಿದೆ. ಕನ್ನಡದಲ್ಲಿ ಇಂತಹ ಕಥೆಗಳು ಅಪರೂಪ. ನಾಯಕನಾಗಿ ಧನ್ವೀರ್, ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ, ಶೋಭ್ ರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಸೇರಿದಂತೆ ಬಲಿಷ್ಠ ತಾರಾಬಳಗ ಚಿತ್ರದಲ್ಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ, ಗಿರೀಶ್ ಆರ್ ಗೌಡ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಶೈಲೇಶ್ ಕುಮಾರ್, ಚೇತನ್ ಸಿದ್ ಸಂಭಾಷಣೆ ಚಿತ್ರಕ್ಕೆ ಶಕ್ತಿ ನೀಡಿವೆ” ಎಂದು ಹೇಳಿದರು.
ನನ್ನ ಪಾತ್ರದಲ್ಲಿ ಎರಡು ಶೇಡ್‌ಗಳಿವೆ. ಒಂದು ಪೊಲೀಸ್ ಅಧಿಕಾರಿ. ಮತ್ತೊಂದು ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ನಾಯಕಿ ಸಂಜನಾ ಆನಂದ್ ಚೆನ್ನಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಮೊದಲಿನಿಂದಲೂ ಸಿಗುತ್ತಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ” ಎಂದರು.
ನಾಯಕಿ ಸಂಜನಾ ಆನಂದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ನಟ ಅಶ್ವಿನ್ ಹಾಸನ್ ಹಾಗೂ ನಟಿ ಆಶಾರಾಣಿ ಕೂಡ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ಪೌರಾಣಿಕ ಮಿಸ್ಟರಿ, ಆಕ್ಷನ್ ಮತ್ತು ಭಾವನೆಗಳ ಮಿಶ್ರಣವಾಗಿರುವ ‘ಹಯಗ್ರೀವ’ ಫೆಬ್ರವರಿ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಕನ್ನಡ ಸಿನಿಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ.



























