Home ಸಿನೆಮಾ ಮೇ 30ಕ್ಕೆ ‘ಕ್ರೇಜಿ ಬ್ರಹ್ಮ’

ಮೇ 30ಕ್ಕೆ ‘ಕ್ರೇಜಿ ಬ್ರಹ್ಮ’

ರವಿಚಂದ್ರನ್–ಹಂಸಲೇಖ ಹಿಟ್ ಜೋಡಿಯ 40 ವರ್ಷದ ಸಂಭ್ರಮ

ಕನ್ನಡ ಸಿನಿರಂಗದ ಎವರ್ಗ್ರೀನ್ ಹಿಟ್ ಜೋಡಿ ರವಿಚಂದ್ರನ್ ಮತ್ತು ಹಂಸಲೇಖ ಮತ್ತೆ ಒಂದೇ ವೇದಿಕೆಯಲ್ಲಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ನಾಲ್ಕು ದಶಕಗಳ ಸಂಗೀತ ಪಯಣವನ್ನು ಆಚರಿಸುವ ‘ಕ್ರೇಜಿ ಬ್ರಹ್ಮ’ ಎಂಬ ಭರ್ಜರಿ ಕಾರ್ಯಕ್ರಮ ಮೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮ “Where Music Meets Magic” ಎಂಬ ಅಡಿಬರಹದೊಂದಿಗೆ ಸಂಜೆ 6ರಿಂದ ರಾತ್ರಿ 12ರವರೆಗೆ ಕೆಂಗೇರಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ನಡೆಯಲಿದೆ. ಈ ವಿಶೇಷ ಸಂಗೀತ ಸಂಭ್ರಮದಲ್ಲಿ ಈ ಜೋಡಿಯ ಅಮರ ಹಾಡುಗಳನ್ನು ಮರುಸೃಷ್ಟಿ ಮಾಡಲಾಗುತ್ತಿದ್ದು, ದಕ್ಷಿಣ ಭಾರತದ ಹಲವು ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ರವಿಚಂದ್ರನ್ ಜೊತೆ ನಟಿಸಿದ ನಟಿಯರು ಕೂಡ ವೇದಿಕೆಯನ್ನು ಅಲಂಕರಿಸಲಿದ್ದಾರೆ.

ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದ ನಿರ್ದೇಶಕ ನ. ವಿನಯ್, “ಇಂದಿಗೂ ಯಾವುದೇ ಸಮಾರಂಭದಲ್ಲಿ ಈ ಜೋಡಿಯ ಹಾಡುಗಳೇ ಕೇಳಿಬರುತ್ತವೆ. ಆ ಕಾಲದ ಮ್ಯಾಜಿಕ್ ಅನ್ನು ಈ ಪೀಳಿಗೆಗೆ ತಲುಪಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಚಿರಂಜೀವಿ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ಕಳುಹಿಸಲಾಗಿದೆ.

ರವಿಚಂದ್ರನ್ ಮಾತನಾಡಿ, “ನಮ್ಮಿಬ್ಬರ ನಡುವೆ ಬಿರುಕು ಬಂದರೂ ಸ್ನೇಹ ಎಂದಿಗೂ ಕಡಿಮೆಯಾಗಿಲ್ಲ. ನನ್ನನ್ನು ‘ಕ್ರೇಜಿ ಸ್ಟಾರ್’ ಮಾಡಿದ್ದು ಹಂಸಲೇಖ. ನಾವು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿ” ಎಂದರು.

ಹಂಸಲೇಖ ಹೇಳುವುದೇನೆಂದರೆ, “ಇದು ಜನರೇ ಬಯಸಿದ ಕಾರ್ಯಕ್ರಮ. ಸಿನಿಮಾ ಮಾಡಲೇಬೇಕು ಎಂಬ ನಿಯಮ ಇಲ್ಲ. ವೇದಿಕೆಯ ಮೇಲೂ ನಾವು ಒಂದಾಗಬಹುದು. ನಮ್ಮ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇದು” ಎಂದರು.

ಈ ಬೃಹತ್ ಕಾರ್ಯಕ್ರಮ ಯಶಸ್ವಿಯಾದರೆ ರಾಜ್ಯದಾದ್ಯಂತ ಇನ್ನಷ್ಟು ಶೋಗಳನ್ನು ನಡೆಸುವ ಯೋಜನೆಯೂ ಇದೆ.