
ಕಿರಣ್ ರಾಜ್ ನಿರ್ದೇಶನದ ಚಿತ್ರ
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕ್ರೈಮ್-ಆಕ್ಷನ್ ಥ್ರಿಲ್ಲರ್ ಸೇರ್ಪಡೆ. ಕಿರಣ್ ರಾಜ್ ಮತ್ತು ಕ್ರಿಶ್ ಅಭಿನಯದ “ಶೇರ್” ಸಿನಿಮಾ ಮೇ 15 ರಂದು ಭರ್ಜರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಆರಂಭದಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ, ತನ್ನ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.
ಪ್ರಸಿದ್ದ್ ನಿರ್ದೇಶನದ ಈ ಸಿನಿಮಾ, ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ. ಸುದರ್ಶನ್ ಸುಂದರರಾಜ್ ನಿರ್ಮಾಣವಾಗಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಹೆಚ್. ಕುಮಾರ್ (ರಾಟೆ) ಜತೆಯಾಗಿದ್ದಾರೆ. ಕಿರಣ್ ರಾಜ್, ಸುರೇಖಾ, ಕ್ರಿಶ್, ತನಿಷಾ ಕುಪ್ಪಂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಸಿದ್ದ್, “ಇದು ನನ್ನ ಮೂರನೇ ಸಿನಿಮಾ. ಸಾಮಾನ್ಯ ಕಥೆಯಂತೆ ಕಾಣಿಸಿದರೂ, ಒಳಹೊಕ್ಕರೆ ಕುತೂಹಲಕರ ಅಂಶಗಳಿವೆ. ಅನಾಥ ಮಕ್ಕಳ ಬದುಕಿನ ಸತ್ಯಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಕ್ರಿಶ್ ರಾಡ್ರಿಗ್ ವಿಲನ್ ಆಗಿ ಕಾಣಿಸಿಕೊಂಡಿದ್ದು, ಅವರ ಸಮರ್ಪಣೆ ವಿಶೇಷ” ಎಂದರು. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ದೊರೆತಿದೆ.
ನಟ ಕ್ರಿಶ್ ಮಾತನಾಡಿ, “ಇದು ನನ್ನ ವಿಲನ್ ಪಾತ್ರ. ‘ದುನಿಯಾ’ ಚಿತ್ರದ ಯೋಗಿ ಅವರ ಪಾತ್ರದಂತೆಯೇ ತೀವ್ರತೆ ಇರುವ ಪಾತ್ರ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ” ಎಂದರು.
ನಾಯಕ ಕಿರಣ್ ರಾಜ್, “ಈ ಚಿತ್ರದಲ್ಲಿ ನಾನು ಅನಾಥ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಕ್ರೈಮ್-ಆಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಾಪಕ ಡಾ. ಸುದರ್ಶನ್ ಸುಂದರರಾಜ್, “ನಾನು ವಕೀಲ ವೃತ್ತಿಯಲ್ಲಿದ್ದೇನೆ. ಮಗನಿಗಾಗಿ ಈ ಸಿನಿಮಾ ಮಾಡಿದ್ದು, ಪ್ರೊಡಕ್ಷನ್ ಹೌಸ್ ಆರಂಭಿಸಿದ್ದೇವೆ. ಕೆ.ಆರ್.ಜಿ ಫಿಲಂಸ್ ವಿತರಣೆ ಮಾಡುತ್ತಿದೆ” ಎಂದು ಹೇಳಿದರು.
ನಟಿ ಸುರೇಖಾ, “ಇದು ನನ್ನ ಎರಡನೇ ಸಿನಿಮಾ. ‘ಭರ್ಜರಿ ಗಂಡು’ ಬಳಿಕ ಇದರಲ್ಲಿ ಡಬಲ್ ಶೇಡ್ ಪಾತ್ರ ಮಾಡಿದ್ದೇನೆ” ಎಂದರು. ತನಿಷಾ ಕುಪ್ಪಂಡ, “ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದು” ಎಂದು ಹಂಚಿಕೊಂಡರು.
ಕಾರ್ಯಕಾರಿ ನಿರ್ಮಾಪಕ ರಾಟೆ ಕುಮಾರ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ನಟ ಶೋಭನ್ ಕೂಡ ಚಿತ್ರದ ಕುರಿತು ಮಾತನಾಡಿದರು. ವಿಜಯ್ ಗುಮ್ಮಿನೇನಿ ಅವರ ಸಂಗೀತ ಈ ಚಿತ್ರಕ್ಕಿದೆ. ಡಾಗ್ ಸತೀಶ್, ಕಿರಣ್ ಕುಮಾರ್ (ಕಾಂಗ್ರೆಸ್ ಮುಖಂಡರು) ಹಾಗೂ ರಾಜೇಶ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಾಜರಿದ್ದರು.





















