
ಬಂಟ್ವಾಳ : ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಬ್ಯಾರಿ, ತುಳು, ಕೊಂಕಣಿ ಹಾಗೂ ಅರೆಭಾಷಾ ಸಾಹಿತ್ಯ ಆಕಾಡೆಮಿಗಳ ಸಂಯುಕ್ತ ಸಹಕಾರದೊಂದಿಗೆ ಕರಾವಳಿ ಕಲೋತ್ಸವ ಬಹು ಸಂಸ್ಕೃತಿ ಉತ್ಸವ ಕಾರ್ಯಕ್ರಮಗಳು ಮೇ ೪ ರಿಂದ ೯ರವರೆಗೆ ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಈ ಬಗ್ಗೆ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇ ೪ ರಂದು ಸಂಜೆ ೫ ಗಂಟೆಗೆ ಅನ್ನ ಪೂರ್ಣೇಶ್ವರಿ ದೇವಸ್ಥಾನದಿಂದ ಸ್ಪರ್ಶಾ ಕಲಾಮಂದಿರದ ಕೀರ್ತಿಶೇಷ ಬಿ ಅಹ್ಮದ್ ಹಾಜಿ ವೇದಿಗೆ ಜಾನಪದ ದಿಬ್ಬಣ ಮೆರವಣಿಗೆಯು ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳ ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಸಾಗಲಿದೆ. ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಜಾನಪದ ದಿಬ್ಬಣ ಉದ್ಘಾಟಿಸುವರು.
ಇದೇ ವೇಳೆ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿ ಮಹಿಳೆಯರಿಗೆ ಸೀರೆ ನಡಿಗೆ ಸ್ಪರ್ಧೆ ನಡೆಯಲಿದ್ದು, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ ಉದ್ಘಾಟಿಸುವರು.
ಸಂಜೆ ೭ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ವೇದಿಕೆ ಉದ್ಘಾಟಿಸುವರು. ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಆಹಾರ ಮೇಳ ಉದ್ಘಾಟಿಸಲಿದ್ದು, ಸಂಸದ ಕ್ಯಾ ಬ್ರಿಜೇಶ್ ಚೌಟ ವಸ್ತು ಮಳಿಗೆ ಉದ್ಘಾಟಿಸುವರು. ಮಾಜಿ ಸಚಿವ ಬಿ ರಮಾನಾಥ ರೈ ಪುಸ್ತಕ ಮಳಿಗೆ ಉದ್ಘಾಟಿಸುವರು. ವಿಶೇಷ ಆಹ್ವಾನಿ ತರಾಗಿ ರಂಗಭೂಮಿ ಕಲಾವಿದ ಡಾ ದೇವದಾಸ ಕಾಪಿಕಾಡ್ ಭಾಗವಹಿಸುವರು ಎಂದ ಅವರು ಅಂತರಾಷ್ಟ್ರೀಯ ಕಬಡ್ಡಿ ಪಟು ರೋಹಿತ್ ಮಾರ್ಲ ಅವರಿಗೆ ಉದಯ ಚೌಟ ಸಾಧನ ಪ್ರಶಸ್ತಿ ನೀಡಲಾಗುವುದು. ಸಾಮಾಜಿಕ ಸಂಘಟಕ ಎಲಿಯಾಸ್ ಸಾಂಕ್ರಿಸ್ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ನೀಡಲಾಗುವುದು. ಕರಾಟೆ, ನೃತ್ಯ, ಕ್ರೀಡಾ ಕ್ಷೇತ್ರದ ಸಾಧಕಿ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಅವರಿಗೆ ಚಿಣ್ಣರ ಸೌರಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಗೂ ಚಿಣ್ಣರಲೋಕ ಸೇವಾ ಟ್ರಸ್ಟ್ ಸಂಸ್ಥೆಯ ದತ್ತು ಸ್ವೀಕರಿಸಿದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಕೊಡೆ ವಿತರಣೆ ನಡೆಯಲಿದೆ ಎಂದರು.
ಮೇ ೫ ರಂದು ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ತುಳು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯ ಲಿದ್ದು, ಮೇ ೬ ರಂದು ಅರೆಭಾಷೆ ಅಕಾಡೆಮಿ ಸಹಯೋಗದೊಂದಿಗೆ ಅರೆ ಭಾಷೆ ಸಾಹಿತ್ಯ ಸಂಭ್ರಮ, ಮೇ ೭ ರಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಬ್ಯಾರಿ ಸಾಹಿತ್ಯ ಸಂಭ್ರಮ, ಮೇ ೮ ರಂದು ಕೊಂಕಣಿ ಅಕಾಡೆಮಿ ಸಹಯೋಗದೊಂದಿಗೆ ಕೊಂಕಣಿ ಸಾಹಿತ್ಯ ಸಂಭ್ರಮ, ಮೇ ೯ ರಂದು ಕರಾವಳಿ ಸರಿಗಮಪ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ನಡೆಯಲಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು, ಗೌರವಾಧ್ಯಕ್ಷ ಪಿ.ಜಯರಾಮ ರೈ, ಆಡಳಿತ ಟ್ರಸ್ಟಿ ತೇವು ತಾರಾನಾಥ್ ಕೊಟ್ಟಾರಿ, ಪ್ರಮುಖರಾದ ಬೇಬಿ ಕುಂದರ್, ಲತೀಫ್ ನೇರಳಕಟ್ಟೆ, ರಝಾಕ್ ಕುಕ್ಕಾಜೆ, ರಾಮಕೃಷ್ಣ ರಾವ್ ಮೊದಲಾದವರಿದ್ದರು.



























