
ಮಂಗಳೂರು: ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ರಾಜ್ಯ ಸರಕಾರವೆ ಬಲಗೊಳಿಸಲು ಒತ್ತಾಯಿಸಿ, ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರ ಒಪ್ಪಂದ ಆದೇಶ ರದ್ದುಗೊಳಿಸಲು ಒತ್ತಾಯಿಸಿ ಸಿಪಿಐಎಂ ನಿಂದ ಜಿಲ್ಲೆಯಾದ್ಯಂತ ಹೋರಾಟ ಮತ್ತು ಮೇ ೧೪ ರಂದು ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಲಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಎಲ್ಲಾ ಹಂತದ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸಲು, ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು, ಸರಕಾರಿ ಆಸ್ಪತ್ರೆಗಳನ್ನು ಅದಕ್ಕಾಗಿ ಗುರುತಿಸಿ, ಒಪ್ಪಂದದ ಆದೇಶ ಹೊರಡಿಸಿರುವುದನ್ನು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಇದು ಸಾರ್ವಜನಿಕ ಆರೋಗ್ಯ ರಂಗವನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಗೊಳಿಸುವ ಸರಕಾರದ ಪ್ರತಿಗಾಮಿ ನಡೆಯಾಗಿದೆ. ರಾಜ್ಯ ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವನ್ನು ತಕ್ಷಣ ಕೈ ಬಿಡಬೇಕು, ವೈದ್ಯರು ಔಷಧಿ ಸಹಿತ ಮೂಲಭೂತ ಸೌಲಭ್ಯ ಗಳನ್ನು ರಾಜ್ಯ ಸರಕಾರದ ವತಿಯಿಂದಲೆ ಒದಗಿಸಿ ಸರಕಾರಿ ಆಸ್ಪತ್ರೆಗಳನ್ನು ಬಲಗೊಳಿಸಬೇಕು. ಎಂದು ಸಿಪಿಐಎಂ ಆಗ್ರಹಿಸುತ್ತದೆ ಒಪ್ಪಂದ ಆದೇಶ ರದ್ದುಗೊಳಿಸುವವರೆಗೂ ತೀವು ಹೋರಾಟವನ್ನು ಸಂಘಟಿಸಲಿದೆ. ಮೇ ೧೪ ರಂದು ಇದರ ಭಾಗವಾಗಿ ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರಗೆ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಒಪ್ಪಿಸುವ ಈ ಆದೇಶ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರ ದಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಲಿದೆ. ಆರೋಗ್ಯ ಕ್ಷೇತ್ರ ಮುಂಬರುವ ದಿನಗಳಲ್ಲಿ ೨ ಪೂರ್ಣ ಪ್ರಮಾಣದಲ್ಲಿ ಖಾಸಗೀರಣ ಗೊಳ್ಳುತ್ತದೆ. ವ್ಯಾಪಾರೀಕರಣ ತೀವ್ರಗೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರು, ಕಡಿಮೆ ಆದಾಯ ದವರು, ಕೆಳಮದ್ಯಮ ವರ್ಗಗಳು ಆರೋಗ್ಯ ಸೇವೆಯಿಂದ ಪೂರ್ಣಪುಮಾಣದಲ್ಲಿ ವಂಚಿತರಾಗಲಿದ್ದಾರೆ. ಖಾಸಗಿಯವರ ಏಕಸ್ವಾಮ್ಯಕ್ಕೆ ಇದು ಕಾರಣ ಆಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಂತು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಮೆಡಿಕಲ್ ಕಾಲೇಜುಗಳು ಆರೋಗ್ಯ ರಂಗದಲ್ಲಿ ಪೂರ್ತಿ ಹಿಡಿತ ಸಾಧಿಸಿವೆ. ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳ ವ್ಯಾಪಾರಿ ನೀತಿಯಿಂದ ಜನತೆ ಪರಿತಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳಿಗೆ ಕನಿಷ್ಠ ಔಷಧಿ, ವೈದ್ಯ ರನ್ನು ಒದಗಿಸದ ಸ್ಥಿತಿ ಇದೆ. ಅದರಂತೆ ಈಗ ಜಿಲ್ಲೆಯ ಮೂಡುಬಿದಿರೆ, ವಿಟ್ಲ ಸಮುದಾಯ ಆಸ್ಪತ್ರೆ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ಅಂತಿಮ ಗೊಂಡಿದೆ. ಖಾಸಗಿ ಗುಣಮಟ್ಟದ ಉತ್ತಮ ಸೇವೆ ಒದಗಿಸುವ ನೆಪಗಳನ್ನು ಮುಂದಿಡಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತಾಲೂಕು ಆಸ್ಪತ್ರೆ ಬದಗಿಸುವುದು, ಜಯದೇವ ಹೃದಯದ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ತೆರೆಯಲು ಹಲವು ಬಾರಿ ಒತ್ತಾಯಿಸಲಾಗಿತ್ತು ಜೊತೆಗೆ ಸರಕಾರಿ ಆಸ್ಪತ್ರೆ ಗಳನ್ನು ಬಲಗೊಳಿಸುವ ಆಗ್ರಹ ಮಾಡಲಾಗಿತ್ತು,ಈ ಬಗ್ಗೆ ಹೆಚ್ಚಿನ ಬೆಂಬಲ ದೊರಕುತ್ತಿರುವ ಸಂದರ್ಭದಲ್ಲಿ ಇರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಮಡಿಲಿಗೆ ಹಾಕುವುದು ಅತ್ಯಂತ ಕೆಟ್ಟ ನಿರ್ಧಾರವಾಗಿದೆ.ರಾಜ್ಯ ಸರಕಾರ ತಕ್ಷಣವೆ ಪಿ.ಪಿ.ಪಿ ಮಾದರಿ ಈ ಖಾಸಗೀಕರಣದ ಒಪ್ಪಂದವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆ ಇಟ್ಟು ಕೊಂಡು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಬಲ ಜನ ಹೋರಾಟ ಸಂಘಟಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಮೇ ೧೪ ರಂದು ಬೃಹತ್ ಮೆರವಣಿಗೆ ಹಮ್ಮಿಕೊಂಡಿದೆ. ಈ ಹೋರಾಟ ಒಪ್ಪಂದದ ಆದೇಶವನ್ನು ಸರಕಾರ ಹಿಂಪಡೆಯುವವರಗೆ ಮುಂದುವರಿಯಲಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ತಾಲೂಕು, ಹೋಬಳಿ ಮಟ್ಟ ದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲಿದೆ. ಜನಪರ ಸಂಘಟನೆ, ಸಮಾನ ಮನಸ್ಕ ಪಕ್ಷಗಳನ್ನು ಜೊತೆ ಸೇರಿಸಿ ತೀವ್ರತರದ ಹೋರಾಟವನ್ನು ನಡೆಸಲಿದೆ. ಸಾರ್ವಜನಿಕ ಆರೋಗ್ಯ ಸೇವೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಬೇಕಾಗಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜನತೆಯಲ್ಲಿ ಮನವಿ ಮಾಡುತ್ತದೆ ಎಂದುವಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿ ಯಲ್ಲಿ ಸಿಪಿಐಎಂ ನ ಮುಖಂಡರಾದ ಯಾದವ ಶೆಟ್ಟಿ,ಸುಕು ಮಾರ್,ಸುನಿಲ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

























