ಮೂಳೆ, ಕೀಲು ಕ್ಯಾನ್ಸರ್ ಅನ್ನು ಸಹ ಗುಣಪಡಿಸುವ ಜೊತೆಗೆ ಅಂಗಾಂಗಗಳನ್ನು ಉಳಿಸಬಹುದಾಗಿದೆ: ಡಾ.ಕೆ.ಟಿ.ಅಜಯ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ. 15-
ಮೂಳೆ ಮತ್ತು ಕೀಲು ಕ್ಯಾನ್ಸರ್ ಹಾಗೂ ಡಯಾಬಿಟಿಕ್ ಪುಟ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಂಪುಟೇಶನ್ ಮಾಡುವ ಬದಲು ತಂತ್ರಜ್ಞಾನದಿಂದ ಕಾಲು ಉಳಿಸುವ ಜೊತೆಗೆ ರೋಗಿಯನ್ನು ಗುಣಮುಖರನ್ನಾಗಿ ಮಾಡುವ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ. ಅಜಯ್ ತಿಳಿಸಿದರು.
ನಗರದ ಹೊರ ವಲಯದ ಯಡಬೆಟ್ಟದ ಬಳಿ ಇರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಿಮ್ಸ್ ಬೋಧನಾ ಅಸ್ಪತ್ರೆಯ 4ನೇ ಮಹಡಿಯಲ್ಲಿರುವ ಅಡಿಟೋರಿಯಂನಲ್ಲಿ ನಡೆದ ಮುಂದುವರಿದ ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಚಾಮರಾಜನಗರ ಸಿಮ್ಸ್ ಅಸ್ಪತ್ರೆ ಉತ್ತಮ ಹೆಸರು ಮಾಡಿದ್ದು, ಕೀಲು ಮತ್ತು ಮೂಳೆ ವಿಭಾಗದಲ್ಲಿ ಹೆಚ್ಚಿನ ಸೇವೆ ಲಭ್ಯವಾಗುತ್ತಿದೆ. ವಿಭಾಗದ ಮುಖ್ಯಸ್ಥ ಡಾ. ಮಾರುತಿ ಮತ್ತು ತಂಡದವರು ಉತ್ತಮ ಚಿಕಿತ್ಸೆಯನ್ನು ನೀಡುವ ಜೊತೆಗೆ ಪರಿಣಿತ ವೈದ್ಯರನ್ನು ಸಹ ತಯಾರು ಮಾಡುತ್ತಿದ್ದಾರೆ. ಈ ತಂಡದ ಕಾರ್ಯ ಶ್ಲಾಘನಿಯವಾಗಿದೆ. ಕೀಲು ಮೊಳೆಗೆ ಸಂಬಂಧಿಸಿ ಚಿಕಿತ್ಸೆ ಹಾಗೂ ತಂತ್ರಜ್ಞಾನ ಬಳಕೆ ಮತ್ತು ಬೋನ್ ಕ್ಯಾನ್ಸರ್ ಅನ್ನು ಗುಣಪಡಿಸುವ ಕಾರ್ಯಗಾರ ಉಪಯುಕ್ತವಾಗಿದೆ. ಇಂಥ ಕಾರ್ಯಗಾರಗಳು ವಿದ್ಯಾರ್ಥಿಗಳಲ್ಲಿ ಅತ್ಮ ವಿಶ್ವಾಸ ವೃದ್ದಿಸುತ್ತಿದೆ. ಚಿಕಿತ್ಸೆಯ ಗುಣಮಟ್ಟವು ಸಹ ಹೆಚ್ಚುತ್ತದೆ ಎಂದರು.
ವಿಭಾಗ ಮುಖ್ಯಸ್ಥ ಡಾ. ಮಾರುತಿ ಮಾತನಾಡಿ, ಚಾಮರಾಜನಗರ ಸಿಮ್ಸ್ ಅಸ್ಪತ್ರೆಯಲ್ಲಿ ಕೀಲು ಮತ್ತು ಮೊಳೆ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ನಮ್ಮ ತಂಡದ ಸಹಕಾರ ಹೆಚ್ಚಿನದ್ದಾಗಿದೆ. ಇಂದಿನ ಕಾರ್ಯಾಗಾರಕ್ಕೆ ಬೆಂಗಳೂರು, ಮೈಸೂರಿನ ತಜ್ಞ ವೈದ್ಯರ ತಂಡವನ್ನು ಕರೆಸಲಾಗಿದೆ. ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಜೊತೆಗೆ ಗುಣಮಟ್ಟz ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಕಾರ್ಯಾಗಾರ ನಡೆಸಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.


ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಡಾ. ಶ್ರೀನಿವಾಸ್ ಚಿಲುಕುರಿ, ಡಾ. ಸುಮನ್ ಬೈರೇಗೌಡ, ಡಾ. ಸೋಹನ್ ರಾಘವೇಂದ್ರ ರವರು ಮೂಳೆ ಕ್ಯಾನ್ಸರ್ ಬಗ್ಗೆ ತಿಳಿಸಿಕೊಟ್ಟರು. ಮೈಸೂರಿನ ಡಾ. ರಘುನಂದನ್ ಅವರು ಡಯಾಬಿಟಿಕ್ ಪುಟ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆಂಪುಟೇಶನ್ ಮಾಡುವ ಬದಲು ಕಾಲನ್ನು ಉಳಿಸುವ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ. ಮಹೇಶ್, ಡಾ. ಮೃತ್ಯಂಜಯ, ಡಾ. ಪುಟ್ಟಸ್ವಾಮಿ, ಡಾ. ರಾಜಶೇಖರ್, ಡಾ.ಶಿವಣ್ಣ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ 22 ದಿನಗಳ ಕಾಲ ಸೈಕಲ್ ಮೂಲಕ ಸಂಚರಿಸಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದÀ ಡಾ. ಸುಮನ್ ಭೈರೇಗೌಡ ಮತ್ತು 8ನೇ ರ್ಯಾಂಕ್ ಪಡೆದ ರಘುನಂದನ್ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಡಿಎಚ್‍ಓ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಿದಂಬರ, ಸಿಮ್ಸ್ ಟೀಚರ್ ಅಸೋಸಿಯೇಷನ್ ಅಧ್ಯಕ್ಷರಾದ ಗಿರಿಶ್ ವಿ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಚಿನ್ನಭೋವಿ, ಕಾರ್ಯಕಾರಿ ಅಧ್ಯಕ್ಷರಾದ ಡಾ. ರಾಘವೇಂದ್ರ ಮೊದಲಾಧವರು ಇದ್ದರು.
ಈ ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ಹಾಗೂ ಸಂಸ್ಥೆಯ ವಿವಿಧ ವಿಭಾಗಗಳಿಂದ ವೈದ್ಯರುಗಳು ಭಾಗವಹಿಸಿದ್ದರು.