
ಪುತ್ತೂರು: ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕ ಸಮೀಪದ ಮುರುವ-ಕಲ್ಲಡ್ಕ ಮೂಲಕ ದರ್ಬೆತ್ತಡ್ಕ ಸಂಪರ್ಕಿಸುವ ನೂತನ ಸೇತುವೆಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ಮಾಡಿದರು. ರೂ. ೨ ಕೋಟಿ ವೆಚ್ಚದಲ್ಲಿ ಈ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯಲಿದ್ದು, ಮುಂದಿನ ೬ ತಿಂಗಳಲ್ಲಿ ಸೇತುವೆ ಕೆಲಸ ಪೂರ್ಣಗೊಳ್ಳಲಿದೆ. ಈ ಹಿಂದೆ ವಿನಯಕುಮಾರ್ ಸೊರಕೆ ಶಾಸಕರಾಗಿದ್ದ ವೇಳೆ ಇಲ್ಲಿ ಕಿರುಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು. ಆ ಬಳಿಕ ಯಾವುದೇ ಶಾಸಕರೂ ಈ ಸೇತುವೆ ಬಗೆಗಿನ ಜನತೆಯ ಬೇಡಿಕೆಗೆ ಕ್ಯಾರೇ ಅಂದಿಲ್ಲ. ನಾನು ಚುನಾವಣಾ ಪ್ರಚಾರಕ್ಕೆ ಬಂದಾಗ ಈ ಸೇತುವೆ ಬಗ್ಗೆ ಬೇಡಿಕೆ ಇಟ್ಟಿದ್ದರು. ಆಗ ಕೊಟ್ಟ ಮಾತಿನಂತೆ ಅನುದಾನ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಈ ಸಂದರ್ಭದಲ್ಲಿ ತಿಳಿಸಿದರು.
ನನಗೆ ಆಶೀರ್ವಾದ ಮಾಡಿ
ಯಾವುದೇ ಪಕ್ಷಭೇದ ಇಲ್ಲದೆ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದೇನೆ. ಈ ಭಾಗದಿಂದ ಕಳೆದ ಬಾರಿ ನನಗೆ ಹೆಚ್ಚು ಓಟಿನ ಬೆಂಬಲ ಸಿಕ್ಕಿಲ್ಲ. ಹಾಗಂತ ಅಭಿವೃದ್ದಿ ವಿಚಾರದಲ್ಲಿ ನಾನು ಪಕ್ಷ ನೋಡಿಲ್ಲ. ನನ್ನ ಕೆಲಸ ಒಳ್ಳೆಯದು ಎಂದು ನಿಮಗೆ ಅನ್ನಿಸಿದರೆ ಮುಂದಿನ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದವರು ವಿನಂತಿಸಿದ ಅವರು ಈ ಸೇತುವೆ ವಿಚಾರದಲ್ಲಿ ಸ್ಥಳೀಯರಾದ ಹಮೀದ್ ಸದಾ ನನಗೆ ಫೋನ್ ಮಾಡುತ್ತಿದ್ದರು. ಅವರ ಕೈಯಿಂದಲೇ ತೆಂಗಿನಕಾಯಿ ಒಡೆಸಿದ್ದೇನೆ. ನೀವು ಸದಾ ನನ್ನ ಜತೆಗೆ ಇರುತ್ತೀರಿ ಎಂಬ ಭರವಸೆ ಇದೆ ಎಂದರು.
ಊಟ..ಕಾಫಿ ಬಿಲ್ ನನ್ನದು..!
ನಾನು ಬಿಜೆಪಿಯಲ್ಲಿದ್ದಾಗ ಒಂದಷ್ಟು ಬಡವರಿಗೆ ೯೪ಸಿ, ೯೪ಸಿಸಿ ಮಾಡಿಕೊಡಿ ಎಂದು ಮಾಜಿ ಶಾಸಕರ ಹತ್ತಿರ ಜನರನ್ನು ಕಳಿಸುತ್ತಿದ್ದೆ. ಆದರೆ ಅವರ ಕೆಲಸ ಮಾಡಿಕೊಡದೆ ನನಗೆ ಅವಮಾನ ಮಾಡುತ್ತಿದ್ದರು. ಬಿಜೆಪಿಯಲ್ಲಿ ಯಾವುದೇ ಪ್ರಮುಖ ಸ್ಥಾನಮಾನ ಕೊಡಲಿಲ್ಲ. ಇವನಿಗೆ ಸ್ಥಾನ ಕೊಟ್ಟರೆ ನಮ್ಮ ಸ್ಥಾನಕ್ಕೆ ಕುತ್ತು ಎಂಬ ನಂಜಿನಿಂದ ನನಗೊಂದು ಕಾರ್ಯಕಾರಿಣಿ ಎಂಬ ಸಣ್ಣ ಸದಸ್ಯತ್ವ ನೀಡಿದ್ದರು. ಆದರೆ ಇವರ ಕಾರ್ಯಕ್ರಮಗಳ ಊಟ, ಕಾಫಿಯಿಂದ ಹಿಡಿದು ಶರಬತ್ತಿನ ತನಕದ ಬಿಲ್ ಮಾತ್ರ ನನ್ನ ಬಳಿಗೆ ಕಳುಹಿಸುತ್ತಿದ್ದರು. ನಾನೇ ಕೊಡುತ್ತಿದ್ದೆ ಎಂದು ಶಾಸಕರು ಹೇಳಿದರು.
೪೦ ವರ್ಷದ ಬೇಡಿಕೆ ಈಡೇರಿದೆ
ಮುರುವದಲ್ಲಿ ಸೇತುವೆಯಾಗುತ್ತದೆ ಎಂದು ಇಲ್ಲಿನ ಜನ ಕನಸಲ್ಲೂ ನೆನಸಲಿಲ್ಲ. ಈ ಹಿಂದೆ ಸೊರಕೆಯ ಕಾಲದಲ್ಲಿ ಇಲ್ಲಿ ಕಿರಿದಾದ ಸೇತುವೆ ನಿರ್ಮಾಣವಾದ ಕಾರಣ ಜನ ಇಷ್ಟು ವರ್ಷ ಹೊಳೆ ದಾಟುತ್ತಿದ್ದರು ಇಲ್ಲದಿದ್ದರೆ ಏನು ಮಾಡಬೇಕಿತ್ತು. ಜನ ಇದನ್ನು ಮರೆಯಬಾರದು. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡುತ್ತಾರೆ ಎಂಬುದಕ್ಕೆ ಈ ಸೇತುವೆಯೇ ಸಾಕ್ಷಿ. ಸೇತುವೆಗೆ ಅಶೋಕ್ ರೈ ೨ ಕೋಟಿ ಅನುದಾನ ನೀಡಿ ಜನತೆಯ ೪೦ ವರ್ಷದ ಬೇಡಿಕೆ ಈಡೇರಿಸಿದ್ದಾರೆ ಎಂದು ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ಕಾರ್ಯಕ್ರಮದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ, ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು, ಬೂತ್ ಅಧ್ಯಕ್ಷ ಅಝೀಝ್ ನೀರ್ಪಾಡಿ, ಗೋವಿಂದ ನಾಯ್ಕ, ಹಂಝ ಉಜಿರೋಡಿ, ಸ್ಥಳೀಯ ಮುಖಂಡರಾದ ಸಂಕಪ್ಪ ಆಳ್ವ, ಸುಧಾಕರ ಆಳ್ವ, ತ್ಯಾಂಪಣ್ಣ ಆಳ್ವ, ವಸಂತ ಶೆಟ್ಟಿ, ಹಾರಿಸ್ ಮುಳಿಯಡ್ಕ, ರಮೇಶ್ ಆಳ್ವ ಕಲ್ಲಡ್ಕ, ಸುಧಾಕರ ಆಳ್ವ ಕಲ್ಲಡ್ಕ, ಜಯರಾಮ ರೈ, ಮೋಹನ ರೈ ಕಲ್ಲಡ್ಕ, ಚಿದಾನಂದ ರೈ, ರಾಧಾಕೃಷ್ಣ ರೈ, ರಾಜೇಶ್ ರೈ, ಜನಾರ್ಧನ ರೈ, ಮಂಜುನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬದ್ರು ಪರ್ಪುಂಜ, ರಝಾಕ್ ಪರ್ಪುಂಜ, ಮಹಮ್ಮದ್ ಅಡ್ಕ, ಪ್ರವೀಣ್ ಅಡ್ಕ ಮತ್ತಿತರರು ಭಾಗವಹಿಸಿದ್ದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ವಂದಿಸಿದರು.
























