
ಸಂಜೆವಾಣಿ ನ್ಯೂಸ್
ಮೈಸೂರು:ಫೆ.10:- ಮುದ್ರಣ ಮಾಧ್ಯಮ ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ’ ಎಂದು ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಮಾನಸಗಂಗೋತ್ರಿಯ ಇಎಂಆರ್‍ಸಿ ಸಭಾಂಗಣದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕ ಹಾಗೂ ನವ ವಿಶ್ವಮಾನವ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜಶೇಖರ ಕೋಟಿ ಸ್ಮರಣಾರ್ಥ 9ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಮಾಧ್ಯಮ ಬಹಳ ಸೂಕ್ಷ್ಮವಾದ ಕ್ಷೇತ್ರ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೆಲಸವನ್ನು ಪರ್ತಕರ್ತರು ಮಾಡುತ್ತಿದ್ದಾರೆ. ಆದರೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಅದು ಈಗ ಕಡಿಮೆಯಾಗಿದೆ’ ಎಂದು ವಿಷಾದಿಸಿದರು.
ಮೌಲ್ಯ ಆಧಾರಿತ ರಾಜಕಾರಣ ಮಾಡಬೇಕು ಎನ್ನುವಂತೆ, ಮೌಲ್ಯ ಆಧಾರಿತ ಪತ್ರಕರ್ತರು ಈಗಲೂ ಇದ್ದಾರೆ. ಗುಣಮಟ್ಟದ ಸುದ್ದಿ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ಮಾಧ್ಯಮ ಮಾಡುತ್ತಿದೆ. ಮೌಲ್ಯ ಆಧಾರಿತವಾದ ಕೆಲಸವನ್ನು ಪ್ರತಿಯೊಬ್ಬರೂ ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ,ಈಗ ಪ್ರತಿ ಕ್ಷೇತ್ರವೂ ತಲ್ಲಣಕ್ಕೆ ಒಳಗಾಗಿದೆ. ಟಿಆರ್‍ಪಿಯ ಭರದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಮುದ್ರಣ ಮಾಧ್ಯಮ ಮಾತ್ರ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ನೈಜ ಪತ್ರಕರ್ತರ ಪಾತ್ರ ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬರುವುದೆಲ್ಲವನ್ನೂ ಫಾರ್ವರ್ಡ್ ಮಾಡದಿರುವ ಜವಾಬ್ದಾರಿಯನ್ನು ಜನರು ನಿರ್ವಹಿಸಬೇಕು. ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು.
ಮೈಸೂರು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ಮಾನಸಗಂಗೋತ್ರಿಯ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಎಚ್.ಪಿ. ಜ್ಯೋತಿ, ಮೈಸೂರು ವಿ.ವಿ. ಗಾಂಧಿ ಭವನದ ನಿವೃತ್ತ ನಿರ್ದೇಶಕ ಪೆÇ್ರ.ಎಸ್. ಶಿವರಾಜಪ್ಪ, ಮೈಸೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್‍ಗೌಡ, ಡಿಸಿಪಿ ಕೆ.ಎಸ್. ಸುಂದರ್‍ರಾಜ್, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಆರ್.ರವಿಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಡಾ.ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು. ಡಾ. ಅಂಬಳೆ ಮಹದೇವಸ್ವಾಮಿ ಕವನ ವಾಚಿಸಿದರು.
ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್, ಖಜಾಂಚಿ ನವೀನ್‍ಕುಮಾರ್, ಯೋಗೇಶ್,ಎನ್. ಮಧುಸೂದನ್, ಚಿದಾನಂದ, ರವಿ ಮೊದಲಾದವರು ಪಾಲ್ಗೊಂಡಿದ್ದರು. ಡಾ.ಬಿ.ಎಸ್. ದಿನಮಣಿ ಸ್ವಾಗತಿಸಿದರು. ಮರಿಸ್ವಾಮಿ ಹಾಗೂ ಸುಮಾರಾಣಿ ಕಾರ್ಯಕ್ರಮ ನಿರೂಪಿಸಿದರು.






























