ಪುತ್ತೂರು: ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕಾ ಜನಮನ ಕಾರ್ಯಕ್ರಮದಲ್ಲಿ ದೀಪಾವಳಿ ಉಡುಗೊರೆ ಕೆಲವರಿಗೆ ಸಿಕ್ಕಿಲ್ಲ. ಜನಸ್ತೋಮ ನೋಡಿ ಕೆಲವರು ವಾಪಾಸು ಹೋಗಿದ್ದಾರೆ. ಇದು ವೈಯುಕ್ತಿಕವಾಗಿ ನನಗೆ ತುಂಬಾ ನೋವು ಕೊಟ್ಟಿದೆ. ಮುಂದಿನ ಜನಮನ ಕಾರ್ಯಕ್ರಮದಲ್ಲಿ ಈ ರೀತಿಯ ನಡೆಯದ ಹಾಗೆ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ರೈಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಶೋಕಾ ಜನಮನ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಟ್ರಸ್ಟ್ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ನಿರೀಕ್ಷೆಗೂ ಹೆಚ್ಚು ಮಂದಿ ಭಾಗವಹಿಸಿದ ಕಾರಣ ಒಂದಷ್ಟು ಗೊಂದಲವಾಯಿತು. ಆದರೂ ಅತ್ಯಂತ ಯಶಸ್ವಿ ಕಾರ್ಯಕ್ರಮ ಇದಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿರುವುದು ಕಾರ್ಯಕ್ರಮದ ಹೆಚ್ಚುಗಾರಿಕೆಯಾಗಿದೆ. ವರುಣನ ಅವಕೃಪೆಯಿಂದಾಗಿ ಸ್ವಲ್ಪ ಮಂದಿಗೆ ಸಣ್ಣಪುಟ್ಟ ತೊಂದರೆಯಾಗಿದೆ. ಮುಂದೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಅವರು ಭರವಸೆ ನೀಡಿದರು. ಟ್ರಸ್ಟ್ ಕಾರ್ಯಕರ್ತರಿಗೆ ಹಾಗೂ ಸ್ವಯಂಸೇವಕರಿಗೆ ಅವರು ಕಾರ್ಯಕ್ರಮದ ಯಶಸ್ವಿಗಾಗಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಅವರು ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಮೂಡಿಬಂದಿದೆ. ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ತೊಡಕು ಉಂಟಾಗುವುದು ಸಹಜ. ಮಳೆಯ ಕಾರಣದಿಂದ ಕೆಲ ಮಂದಿಗೆ ಉಡುಗೊರೆ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ವಿಷಾಧ ವ್ಯಕ್ತ ಪಡಿಸುವುದಾಗಿ ತಿಳಿಸಿದರು.
ಟ್ರಸ್ಟ್‌ನ ನಿಹಾಲ್ ಪಿ ಶೆಟ್ಟಿ, ನಿರಂಜನ್ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ, ಉಮಾನಾಥ ಶೆಟ್ಟಿ ಪೆರ್ನೆ, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.


























