
(ಸಂಜೆವಾಣಿ ವಾರ್ತೆ)
ಕುರುಗೋಡು, ಅ.16: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ವಿವಿಧ ಸಮುದಾಯಗಳ ಮುಖಂಡರು ಇಲ್ಕಿನ ತಹಸೀಲ್ದಾರ್ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದ್ದನ್ನು ನ್ಯಾಯಾಲಯದ ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಮೀಸಲಾತಿ ಹೆಚ್ಚಳದ ವಿಚಾರವನ್ನು ಪುನರ್ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಮಾಜದ ಮುಖಂಡ ವಿ.ಎಸ್. ಶಿವಶಂಕರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಂವಿಧಾನದ ಒಂಬತ್ತನೇ ಅನುಸೂಚಿಗೆ ಅಗತ್ಯ ತಿದ್ದುಪಡಿ ತರಬೇಕು. ಈ ಕುರಿತು ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದ ಲೋಕಸಭಾ ಸದಸ್ಯರು ಕಳೆದ ಮೂರು ವರ್ಷಗಳಿಂದ ಮೀಸಲಾತಿ ಹೆಚ್ಚಳದ ವಿಚಾರವಾಗಿ ಲೋಕಸಭೆಯಲ್ಲಿ ಸಮರ್ಪಕವಾಗಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದ ಅವರು. ರಾಜ್ಯದ ಸಂಸದರು ಸೇರಿದಂತೆ ದೇಶದ ಎಲ್ಲ ಲೋಕಸಭಾ ಸದಸ್ಯರು ಈ ವಿಷಯದ ಕುರಿತು ಚರ್ಚಿಸಿ, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಬೇಡಿಕೆಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಮೀಸಲಾತಿ ಹೆಚ್ಚಳದ ಕುರಿತು ಚರ್ಚಿಸಬೇಕು. ಬಳಿಕ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು, ಈ ಕುರಿತು ಮಸೂದೆ ಮಂಡಿಸುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಶಿವಶಂಕರ ಆಗ್ರಹಿಸಿದರು.
ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
ಪ್ರತಿಭಟನೆಯಲ್ಲಿ ಸರ್ವ ಪಕ್ಷಗಳ ವಿವಿಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರಾದ ನಾಗರಾಜ್, ಸಿದ್ದಪ್ಪ, ಕಲ್ಗುಡೆಪ್ಪ ಶಿವಕುಮಾರ್, ಅಂಬಣ್ಣ, ಮಲ್ಲಿಕಾರ್ಜುನ, ಜಡೆಪ್ಪ, ಸೀನಪ್ಪ, ಅಂಬಣ್ಣ, ಹನುಮಂತ, ಬಸವರಾಜ್, ಸೋಮಪ್ಪ, ಭೀಮಯ್ಯ ಭಾಗವಹಿಸಿದ್ದರು.
























